ನವದೆಹಲಿ, ಆ. 21 (DaijiworldNews/HR):ಕೊರೊನಾಗೆ ಮದ್ದು ಕಂಡುಹಿಡಿದಿದ್ದೇನೆ ಎಂದು ಘೋಷಿಸಿಕೊಂಡಿದ್ದ ಆಯುರ್ವೇದ ವೈದ್ಯ ಹರಿಯಾಣ ಮೂಲದ ಡಾ. ಓಂಪ್ರಕಾಶ್ ವೈದ್ ಗೆ ಸುಪ್ರೀಂ ಕೋರ್ಟ್ 10,000 ರೂ. ದಂಡ ವಿಧಿಸಿದೆ.
ಔಷಧದ ಬಗ್ಗೆ ಸಂದರ್ಶನ ನೀಡಿದ್ದ ಡಾ. ಓಂಪ್ರಕಾಶ್ ತಾನು ಕಂಡುಹಿಡಿದಿರುವ ಔಷಧವನ್ನು ಕೊರೊನಾ ಚಿಕಿತ್ಸೆಗೆ ಬಳಸಬಹುದು. ದೇಶದ ಎಲ್ಲ ವೈದ್ಯರು ಮತ್ತು ಆಸ್ಪತ್ರೆಗಳು ತನ್ನ ಔಷಧಿಯನ್ನು ಕೊರೊನಾ ರೋಗಿಗಳಿಗೆ ನೀಡಬಹುದು ಎಂದಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 10,000 ರೂ.ಗಳ ದಂಡ ವಿಧಿಸಿದೆ.
ತಾನು ಕಂಡುಹಿಡಿದಿರುವ ಮದ್ದಿನಿಂದ ಕೊರೊನಾ ರೋಗ ಗುಣವಾಗಲಿದೆ ಎಂದು ಅವರು ಘೋಷಿಸಿಕೊಂಡಿದ್ದ ಅವರು, ಆಯುರ್ವೇದಿಕ್ ಮೆಡಿಸಿನ್ ಆಯಂಡ್ ಸರ್ಜರಿ (ಬಿಎಎಂಎಸ್)ನಲ್ಲಿ ಡಿಗ್ರಿ ಪಡೆದಿರುವ ಡಾ. ಓಂ ಪ್ರಕಾಶ್ ತಾನು ಕಂಡುಹಿಡಿದ ಔಷಧವನ್ನು ಕೊರೋನಾ ಚಿಕಿತ್ಸೆಗೆ ಬಳಸುವಂತೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗೆ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಿದ್ದರು.
ಇನ್ನು ಸುಪ್ರೀಂಕೋರ್ಟ್ನ ನ್ಯಾ. ಸಂಜಯ್ ಕೆ. ಕೌಲ್ ನೇತೃತ್ವದ ನ್ಯಾಯಪೀಠ ಈ ಅರ್ಜಿಯನ್ನು ತಿರಸ್ಕರಿಸಿದ್ದು, ಈ ರೀತಿ ಪಿಐಎಲ್ ಸಲ್ಲಿಸಿದ್ದಕ್ಕೆ ತರಾಟೆ ತೆಗೆದುಕೊಂಡಿದೆ. ಪ್ರಚಾರ ತೆಗೆದುಕೊಳ್ಳುವ ಉದ್ದೇಶದಿಂದ ಡಾ. ಓಂ ಪ್ರಕಾಶ್ ಈ ರೀತಿ ಪಿಐಎಲ್ ಸಲ್ಲಿಸಿದ್ದಾರೆ ಎಂದು ಅರ್ಜಿಯನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯ ದಂಡ ವಿಧಿಸಿದೆ.