ನವದೆಹಲಿ,ಆ. 21 (DaijiworldNews/HR): ಭಾರತದಲ್ಲಿ ಕೊರೊನಾ ವೈರಸ್ ಅನ್ನು ನಿಗ್ರಹಿಸುವ ಮೊಟ್ಟ ಮೊದಲ ಲಸಿಕೆ ಈ ವರ್ಷಾಂತ್ಯದದೊಳಗೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಮತ್ತು ಸಾವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವಾರು ಸಂಸ್ಥೆಗಳು ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಸಿಕೆ ಮತ್ತು ಔಷಗಳನ್ನು ಅಭಿವೃದ್ದಿಗೊಳಿಸುವಲ್ಲಿ ಪ್ರಯತ್ನಪಡುತ್ತಿದ್ದು, ಮೊಟ್ಟ ಮೊದಲ ಲಸಿಕೆ ಈ ವರ್ಷಾಂತ್ಯದಲ್ಲಿ ದೇಶದ ಜನರಿಗೆ ಲಭ್ಯವಾಗಲಿದ್ದು, ಮುಂದಿನ ವರ್ಷ ಪ್ರಾರಂಭದಲ್ಲಿ ಮತ್ತಷ್ಟು ಲಸಿಕೆ ಮತ್ತು ಔಷಗಳು ಭಾರತೀಯರಿಗೆ ದೊರೆಯಲಿವೆ ಎಂದು ಹರ್ಷವರ್ಧನ್ ಹೇಳಿದರು.
ಇನ್ನು ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ವಿಶೇಷ 3-ಟಿ ಸೂತ್ರವನ್ನು ಅಳವಡಿಸಿಕೊಂಡಿದೆ. ಟೆಸ್ಟ್- ಟ್ರಾಕ್ -ಟ್ರೀಟ್(ಪರೀಕ್ಷೆ, ರೋಗಪತ್ತೆ, ಚಿಕಿತ್ಸೆ) ಈ ಮೂಲಕ ಕೊರೊನಾ ನಿಯಂತ್ರಿಸಲು ನಮ್ಮ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಕೋವಿಡ್-19 ವೈರಸ್ ಯಾವಾಗ ಕಡಿಮೆಯಾಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ ಅವರು, ವಿವಿಧ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಸೋಂಕು ಹಾಗೂ ಸಾವಿನ ವರದಿಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ. ಭಾರತದಲ್ಲಿ ಸೋಂಕನ್ನು ನಿಯಂತ್ರಿಸಲು ಲಸಿಕೆಯನ್ನು ಆದಷ್ಟು ಶೀಘ್ರ ಅಭಿವೃದ್ಧಿಗೊಳಿಸುವುದೇ ನಮ್ಮ ಗುರಿಯಾಗಿದ್ದು, ಈ ವರ್ಷಾಂತ್ಯದಲ್ಲೇ ಕೊರೊನಾ ವಾಕ್ಸಿನ್ ಲಭಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.