ಬೆಂಗಳೂರು, ಆ 21 (DaijiworldNews/PY): ನನ್ನ ಫೋನ್ ಕದ್ದಾಲಿಕೆ ಆಗಿದೆ ಎಂದು ಗಂಭೀರ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಆರ್ ಅಶೋಕ್, ಕಾಂಗ್ರೆಸ್ನವರಿಗೆ ಫೋನ್ ಟ್ಯಾಪ್ ಮಾಡುವ ಸಂಸ್ಕೃತಿ ಇದೆ. ಫೋನ್ ಟ್ಯಾಪಿಂಗ್ ಮಾಡುವಂತ ಅಗತ್ಯ ನಮಗಿಲ್ಲ ಎಂದಿದ್ದಾರೆ.
ಫೋನ್ ಟ್ಯಾಪ್ ಆಗಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗಂಭೀರವಾದ ಆರೋಪ ಮಾಡಿದ್ದು, ನಿನ್ನೆಯಿಂದ ಕರೆಗಳೇ ಹೋಗುತ್ತಿಲ್ಲ. ನನ್ನ ಫೋನ್ ಶೇ.100ರಷ್ಟು ಟ್ಯಾಪ್ ಆಗಿದೆ. ಈ ವಿಚಾರದ ಬಗ್ಗೆ ನಾನು ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್ ಅವರು, ಈ ಹಿಂದೆಯೂ ಕೂಡಾ ಡಿಕೆಶಿ ಅವರ ಫೋನ್ ಟ್ಯಾಪ್ ಆಗಿತ್ತು. ಹಿಂದಿನ ಸರ್ಕಾರ ಫೋನ್ ಟ್ಯಾಪ್ ತನಿಖೆ ವಿಚಾರ ಒಂದು ಹಂತಕ್ಕೆ ಬಂದು ತಲುಪುತ್ತಿದೆ. ನಮ್ಮ ಸರ್ಕಾರಕ್ಕೆ ಫೋನ್ ಟ್ಯಾಪ್ ಮಾಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಭದ್ರವಾಗಿದೆ ಎಂದು ತಿಳಿಸಿದ್ದಾರೆ.
ಈ ವಿಚಾರವು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಅನ್ನಿಸುತ್ತಿದೆ. ಫೋನ್ ಟ್ಯಾಪ್ ಮಾಡುವ ಸಂಸ್ಕೃತಿ ಏನಿದ್ದರೂ ಕಾಂಗ್ರೆಸ್ನವರದ್ದು. ಗೃಹ ಸಚಿವರು ಯಾಕೇ ಈ ರೀತಿಯ ಕೆಲಸ ಮಾಡುತ್ತಾರೆ. ಅವರು ಅಂತಹ ಸಂಸ್ಕೃತಿಯಿಂದ ಬಂದವರಲ್ಲ. ಕಾಂಗ್ರೆಸ್ಸಿಗರೇ ಇಂತಹ ಕೆಟ್ಟ ಸಂಸ್ಕೃತಿಯನ್ನು ಬಿಟ್ಟುಬಿಡಿ. ಡಿಕೆಶಿ ಅವರು ದಬ್ಬಾಳಿಕೆ ಹಾಗೂ ದೌರ್ಜನ್ಯದಂತಹ ಪರಂಪರೆಯನ್ನು ಕೈಬಿಡಲಿ. ನಾನು ಡಿಕೆಶಿ ಅವರಿಗೆ ವಿನಯದಿಂದ ತಿಳುವಳಿಕೆ ಹೇಳಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅಭದ್ರತೆ ಇದೆ. ಈ ಕಾರಣದಿಂದ ಅವರು ಇಂತಹ ಕೆಲಸ ಮಾಡಿದ್ದಾರೆ. ನಮಗೆ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂಥ್ ಅವರು ದಕ್ಷ ಅಧಿಕಾರಿಯಾಗಿದ್ದು, ಗಲಭೆಯಲ್ಲಿ ಪಾಲ್ಗೊಂಡವರನ್ನು ಬಂಧಿಸಿದ್ದಾರೆ. ಆದರೆ, ಆರೋಪಿಗಳನ್ನು ಬಂಧಿಸಿದ ಪೊಲೀಸ್ ಕಮಿಷನರ್ ಅನ್ನು ಬಿಜೆಪಿಯ ಏಜೆಂಟ್ ಎಂದು ಹೇಳಿರುವ ಎಷ್ಟು ಸರಿ. ಈ ರೀತಿಯಾದ ಮಾತುಗಳು ಒಳ್ಳೆಯದಲ್ಲ ಎಂದು ಆರೋಪಿಸಿದರು.