ನವದೆಹಲಿ, ಆ 21 (DaijiworldNews/PY): ನಕಲಿ ಕಂಪೆನಿಯ ಹೆಸರಿನ ಮೂಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷಕ್ಕೆ 2 ಕೋಟಿ. ರೂ. ದೇಣಿಗೆ ನೀಡಿದ ಆರೋಪದ ಮೇಲೆ ಆರ್ಥಿಕ ಅಪರಾಧ ವಿಭಾಗದ ದೆಹಲಿ ಪೊಲೀಸರು ಇಬ್ಬರನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದೆಹಲಿ ಮೂಲದ ಮುಖೇಶ್ ಶರ್ಮಾ ಪ್ರಾಪರ್ಟಿ ಡೀಲರ್ ಮತ್ತು ತಂಬಾಕು ವ್ಯಾಪಾರಿ ಎನ್ನಲಾಗಿದೆ. ಇನ್ನೊರ್ವ ಆರೋಪಿಯ ಗುರುತು ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
ಈ ಆರೋಪಿಗಳು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ 2014ರ ಮಾರ್ಚ್ 31ರಂದು ಡಿಡಿ ಮುಖಾಂತರ 2 ಕೋಟಿ.ರೂ.ದೇಣಿಗೆ ನೀಡಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.
ದೆಹಲಿ ಸಚಿವ ಸ್ಥಾನದಿಂದ ವಜಾ ಆದ ಬಳಿಕ ಬಿಜೆಪಿಗೆ ಸೇರಿದ್ದ ಕಪಿಲ್ ಮಿಶ್ರಾ ಅವರೂ ಕೂಡಾ ಈ ಬಗ್ಗೆ ಆರೋಪಿಸಿದ್ದು, ಆಮ್ ಆದ್ಮಿ ಪಕ್ಷಕ್ಕೆ ನಕಲಿ ಕಂಪೆನಿಗಳಿಂದ ಹಣ ಬಂದಿರುವುದಾಗಿ ತಿಳಿಸಿದ್ದರು. ಎಎಪಿಗೆ ದೇಣಿಗೆಯ ಹೆಸರಿನಲ್ಲಿ ಹಣ ಬರುತ್ತಿದ್ದು. ಇದರಲ್ಲಿ ಭಾರಿ ಅಕ್ರಮ ನಡೆಯುತ್ತಿವೆ ಎಂದು ಮಿಶ್ರಾ ಆರೋಪಿಸಿದ್ದರು ಮತ್ತು 2 ಕೋಟಿ ರೂ.ಗಳ ಅನುಮಾನಾಸ್ಪದ ದೇಣಿಗೆಯ ಬಗ್ಗೆಯೂ ಕೇಳಿದ್ದರು.
ಹಲವಾರು ನಕಲಿ ಕಂಪನಿಗಳು ಎಎಪಿಗೆ ಹಣವನ್ನು ನೀಡಿದ್ದು, ಈ ಬಗ್ಗೆ ಪಕ್ಷಕ್ಕೆ ತಿಳಿದಿದೆ ಎಂದು ಆರೋಪಿಸಿದ್ದರು.