ನವದೆಹಲಿ,ಆ. 21 (DaijiworldNews/HR): ಕೊರೊನಾ ವೈರಸ್ ಸೋಂಕು ಭಾರತೀಯ ಪ್ರತಿ ನಾಲ್ವರಲ್ಲಿ ಕನಿಷ್ಠ ಒಬ್ಬರಿಗೆ ಹರಡುವ ಸಾಧ್ಯತೆ ಇದೆ. ಇದೀಗ ಸರ್ಕಾರವು ತಿಳಿಸುವ ಅಂಕಿ ಅಂಶಗಳಿಗಿಂತಲೂ ಕೊರೊನಾ ವೈರಸ್ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಮುಂಚೂಣಿ ಖಾಸಗಿ ಲ್ಯಾಬೊರೇಟರಿಯೊಂದು ತಿಳಿಸಿದೆ.
ಇನ್ನು ಡಾ. ಎ. ವೇಲುಮಣಿ ಅವರು ತಮ್ಮ ಕಂಪೆನಿ ಥೈರೋಕೇರ್ ಭಾರತದಾದ್ಯಂತ ಸುಮಾರು 2.70 ಲಕ್ಷ ಜನರ ಆಂಟಿಬಾಡಿ ಪರೀಕ್ಷೆ ಮಾಡಿದ್ದು, ಅದರಂತೆ ಸರಾಸರಿ ಶೇ 26 ಮಂದಿಯಲ್ಲಿ ಪ್ರತಿಕಾಯಗಳು ಇರುವುದು ಕಂಡುಬಂದಿದ್ದು, ನಾವು ನಿರೀಕ್ಷೆ ಮಾಡಿರುವುದಕ್ಕಿಂದಲೂ ಹೆಚ್ಚಿನ ಪ್ರಮಾಣದಲ್ಲಿದೆ. ಮಕ್ಕಳು ಸೇರೆ ಎಲ್ಲಾ ವಯೋಮಾನದ ಗುಂಪುಗಳಲ್ಲಿಯೂ ಈ ಪ್ರತಿಕಾಯಗಳ ಅಸ್ತಿತ್ವ ಒಂದೇರೂಪದಾಗಿದ್ದೆ ಎಂದು ವೇಲುಮಣಿ ತಿಳಿಸಿದ್ದಾರೆ.
ಸರ್ಕಾರ ನಡೆಸಿರುವ ಸಮೀಕ್ಷೆಗಳಂತೆಯೇ ಮುಂಬೈನಂತಹ ನಗರಗಳಲ್ಲಿ ಥೈರೋ ಕೇರ್ ಸಮೀಕ್ಷೆ ಹಲವು ಸಂಗತಿಗಳನ್ನು ತೆರೆದಿಟ್ಟಿದೆ. ಶೇ 57ರಷ್ಟು ಜನಸಂಖ್ಯೆ ಜನನಿಬಿಡ ಕೊಳೆಗೇರಿಗಳಲ್ಲಿ ಈಗಾಗಲೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದೆ ಎಂದರು.
ಕಳೆದ ಏಳು ವಾರಗಳಲ್ಲಿ ದೇಶದ 600 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಡಿಸೆಂಬರ್ ಅಂತ್ಯದೊಳಗೆ ಪ್ರತಿಕಾಯ ಹೊಂದಿರುವ ಭಾರತೀಯರ ಜನಸಂಖ್ಯೆ ಶೇ 40ಕ್ಕೆ ಏರಲಿದೆ ಎಂದು ಡಾ. ಎ ವೇಲುಮಣಿ ಹೇಳಿದ್ದಾರೆ.