ನವದೆಹಲಿ, ಆ 22 (DaijiworldNews/PY): ಚುನಾವಣಾ ಆಯುಕ್ತರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಶೋಕ್ ಲವಾಸಾ ಅವರ ಸ್ಥಾನಕ್ಕೆ ಹಣಕಾಸು ಇಲಾಖೆಯ ನಿವೃತ್ತ ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ.
ಅಶೋಕ್ ಲವಾಸಾ ಅವರ ಅಧಿಕಾರವಧಿ ಆಗಸ್ಟ್ 31ರಂದು ಕೊನೆಗೊಳ್ಳಲಿದ್ದು, ಬಳಿಕ ಭಾರತೀಯ ಚುನಾವಣಾ ಆಯೋಗದ ಆಯುಕ್ತರಾಗಿ ರಾಜೀವ್ ಕುಮಾರ್ ಅವರು ಸೆಪ್ಟೆಂಬರ್ 1ರಿಂದ ಅಧಿಕಾರ ವಹಿಸಲಿದ್ದಾರೆ.
ರಾಜೀವ್ ಕುಮಾರ್ ಅವರು ಜಾರ್ಖಂಡ್ನ 1984ರ ಬ್ಯಾಚ್ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದರು. ಫೆ.1960ರಲ್ಲಿ ರಾಜೀವ್ ಕುಮಾರ್ ಅವರು ಜನಿಸಿದ್ದು, ಐದು ವರ್ಷಗಳವರೆಗೆ ಅವರ ಅಧಿಕಾರವಧಿ ಮುಂದುವರೆಯಲಿದೆ.
ನಿಯಮಗಳ ಪ್ರಕಾರ, ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವವರ ಅಧಿಕಾರವಧಿಯು 6 ವರ್ಷವಾಗಿದ್ದು ಅಥವಾ ಅಧಿಕಾರಿಗೆ 65 ವರ್ಷ ವಯಸ್ಸಾಗುವವರೆಗೆ ಯಾವುದು ಮೊದಲಾಗಿರುತ್ತದೋ ಅಲ್ಲಿಯ ತನಕ ಇರಲಿದೆ.
ಸಂವಿಧಾನದ 324(2) ಪರಿಚ್ಛೇದದ ಅನುಸಾರವಾಗಿ, ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅವರನ್ನು ನೇಮಕ ಮಾಡಲು ಅಧ್ಯಕ್ಷರು ಸಂತೋಷಪಟ್ಟಿದ್ದಾರೆಎಂದು ಕಾನೂನು ಮತ್ತು ನ್ಯಾಯ ಸಚಿವಾಲಯದ ಅಧಿಕೃತ ಅಧಿಸೂಚನೆ ತಿಳಿಸಿದೆ.
ರಾಜೀವ್ ಕುಮಾರ್ ಅವರು ಈ ಹಿಂದೆ ಹಣಕಾಸು ಕಾರ್ಯದರ್ಶಿಯಾಗಿ ಸೆಪ್ಟೆಂಬರ್ 1, 2017 ರಿಂದ ಫೆಬ್ರವರಿ 29, 2020 ರವರೆಗೆ ಸೇವೆ ಸಲ್ಲಿಸಿದ್ದರು. ಅವರು ಮಾರ್ಚ್ 2012 ರಿಂದ ಹಣಕಾಸು ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಇತರ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಶೋಕ್ ಲವಾಸಾ ಅವರು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ನ ಉಪಾಧ್ಯಕ್ಷರಾಗಿ ನೇಮಕಗೊಂಡ ನಿಟ್ಟಿನಲ್ಲಿ ಚುನಾವಣಾ ಆಯುಕ್ತರ ಸ್ಥಾನಕ್ಕೆ ರಾಜೀನಾಮೆ ನೀಡದ್ದರು.