ಬೆಂಗಳೂರು, ಆ 22 (DaijiworldNews/PY): ಗಣೇಶ ಚತುರ್ಥಿ ಹಿನ್ನೆಲೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ನಾಡಿನ ಸಮಸ್ತ ಜನತೆ ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಶುಭಕೋರಿರುವ ಅವರು, ನಾಡಿನ ಸಮಸ್ತ ಜನತೆಗೆ ವಿನಾಯಕ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ರಾಜ್ಯದ ಪ್ರಗತಿಯ ಹಾದಿಯಲ್ಲಿ ಇರುವ ಕಂಟಕ, ಅಡಚಣೆಗಳನ್ನು ಗಣಪತಿಯು ದೂರಮಾಡಲಿ ಹಾಗೂ ರಾಜ್ಯದ ಜನತೆಗೆ ವಿನಾಯಕ ಸನ್ಮಂಗಳವನ್ನುಂಟು ಮಾಡಲಿ. ಕೊರೋನಾ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸೋಣ ಎಂದಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೂಡಾ ಶುಭ ಹಾರೈಸಿದ್ದು, ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಕಾಮನೆಗಳು. ವಿಘ್ನೇಶ್ವರನು ಲೋಕದಲ್ಲಿರುವ ಸಕಲ ವಿಘ್ನಗಳನ್ನು ನಿವಾರಿಸಿ, ಸುಖ-ಶಾಂತಿ, ಆರೋಗ್ಯ, ಸಕಾರಾತ್ಮಕತೆಯನ್ನು ತಂದು ಎಲ್ಲರನ್ನೂ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಚರಣೆ ಸರಳವಾಗಿರಲಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ನನ್ನ ಕೋರಿಕೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಗಣೇಶ ಚತುರ್ಥಿ ನಾಡಿನ ಸಮಸ್ತ ಬಂಧು-ಬಾಂಧವರಿಗೆ ಸುಖ,ಸಂತೋಷ ಮತ್ತು ನೆಮ್ಮದಿಯನ್ನು ಕರುಣಿಸಲಿ. ಮನುಕುಲದ ವಿಘ್ನಗಳೆಲ್ಲ ದೂರವಾಗಲಿ. ಗಣೇಶನ ಹಬ್ಬವನ್ನು ಮನದುಂಬಿ ಸಂಭ್ರಮಿಸಿ, ನಿಮ್ಮ ಮತ್ತು ನಿಮ್ಮವರೆಲ್ಲರ ಆರೋಗ್ಯದ ಕಡೆ ವಿಶೇಷ ಗಮನ ಇರಲಿ. ಗಣೇಶ ಚತುರ್ಥಿಯ ಶುಭಹಾರೈಕೆಗಳು ಎಂದು ತಿಳಿಸಿದ್ದಾರೆ.