ಹೈದರಾಬಾದ್, ಆ. 22 (DaijiworldNews/MB) : ಮಹಿಳೆಯರು ಸೇರಿ ನೂರಕ್ಕೂ ಅಧಿಕ ಮಂದಿ ಸುಮಾರು 5 ಸಾವಿರ ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಹೈದರಾಬಾದ್ನಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ಹೈದರಾಬಾದ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಲವು ಸಂಘಟನೆಗಳ ಸದಸ್ಯರು, ವೈದ್ಯರು, ಚಿನ್ನಾಭರಣ ಮಾರಾಟಗಾರರು, ಪತ್ರಕರ್ತರು, ಸಿನಿಮಾ ಕ್ಷೇತ್ರದವರು, ಕುಟುಂಬಸ್ಥರು ಸೇರಿದಂತೆ 139 ಮಂದಿ ವಿರುದ್ದ ಮಹಿಳೆ ದೂರು ದಾಖಲಿಸಿದ್ದು ಈ ಪೈಕಿ ಹಲವರು ಮಹಿಳೆಯರಾಗಿದ್ದಾರೆ. ಕೆಲವರು ಬೆಂಗಳೂರು ಮತ್ತು ಅಮೆರಿಕದಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಇನ್ನು ಕೆಲವು ಹೆಸರು ಇಲ್ಲದೆಯೇ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
2009ರಲ್ಲಿ ಮರಿಯಲಗುಡ್ಡ ಎಂಬಲ್ಲಿನ ವ್ಯಕ್ತಿಯೊಬ್ಬರನ್ನು ವಿವಾಹವಾಗಿರುವ ಈ ಮಹಿಳೆಯು ನಿರುದ್ಯೋಗಿಯಾಗಿದ್ದು ಮೊದಲು ಪತಿಯ ಮನೆಯವರು ಲೈಂಗಿಕ ದೌರ್ಜನ್ಯ, ಹಿಂಸೆ ನಡೆಸಿದ್ದಾರೆ. ಈ ಕಾರಣದಿಂದಾಗಿ ಮಹಿಳೆ 2010ರಲ್ಲಿ ಪತಿಯಿಂದ ವಿಚ್ಚೇದನ ಪಡೆದಿದ್ದಾರೆ. ಬಳಿಕ ಕಾಲೇಜಿಗೆ ಸೇರಿ, ವಿದ್ಯಾಭ್ಯಾಸ ಆರಂಭ ಮಾಡಿದ್ದರು. ಇದಾದ ಬಳಿಕ ಮಹಿಳೆಯ ಮೇಲೆ 5,000 ಬಾರಿ ಅತ್ಯಾಚಾರ ಮಾಡಲಾಗಿದೆ. ಸಾಮೂಹಿಕ ಅತ್ಯಾಚಾರವೂ ನಡೆದಿದೆ. ಹಾಗೆಯೇ ಇದರ ಚಿತ್ರೀಕರಣ ಕೂಡಾ ಮಾಡಲಾಗಿದೆ. ಹಾಗೆಯೇ ಜಾತಿಯ ಹೆಸರಿನಲ್ಲಿ ನಿಂದನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಕೊಲೆ ಬೆದರಿಕೆ, ಆಸಿಡ್ ಎರಚುವ ಬೆದರಿಕೆ ಹಾಕಲಾಗಿದೆ.ಆರೋಪಿಗಳು ಆನ್ಲೈನ್ನಲ್ಲಿ ಈ ಲೈಂಗಿಕ ದಂಧೆ ನಡೆಸುತ್ತಿದ್ದು ನನ್ನಂತೆ ಅನೇಕ ಮಹಿಳೆಯರು ಈ ಕಿಡಿಗೇಡಿಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಮಹಿಳೆ ನೀಡಿದ ದೂರಿನಂತೆ ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪಂಜಗುಟ್ಟ ಪೊಲೀಸರು, ಸದ್ಯ ಮಹಿಳೆಯ ದೂರಿನಂತೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಆಕೆಯ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಪ್ರಸ್ತುತ ಈ ದೂರಿಗೆ ಸಂಬಂಧಿಸಿದ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.