ಬೆಂಗಳೂರು,ಆ. 22(DaijiworldNews/HR): ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರತಿಭಟನೆ ಮಾಡಿ ರೋಗಿಗಳಿಗೆ ತೊಂದರೆ ಮಾಡಬೇಡಿ. ವೈದ್ಯೋ ನಾರಾಯಣೋಹರಿಃ' ಎಂದು ನಂಬಿರುವ ಜನರ ಸೇವೆಗೆ ಮುಂದಾಗಿ ಎಂದು ಮೈಸೂರಿನ ಡಿಎಚ್ಓ ಕಚೇರಿ ಮುಂದೆ ಪ್ರತಿಭಟಿಸುತ್ತಿರವ ವೈದ್ಯ ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈಗಾಗಲೇ ಆರೋಗ್ಯಾಧಿಕಾರಿ ಶ್ರೀ ನಾಗೇಂದ್ರ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ 7 ದಿನಗಳೊಳಗೆ ವರದಿ ನೀಡಲು ಮೈಸೂರಿನ ಪ್ರಾದೇಶಿಕ ಆಯುಕ್ತರನ್ನು ನೇಮಿಸಲಾಗಿದೆ. ಆದರೂ ವೈದ್ಯರು ಈ ರೀತಿಯಾಗಿ ಪ್ರತಿಭಟನೆ ಮಾಡುವುದು ಸರಿಯಲ್ಲ. ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಇನ್ನು ನಾಗೇಂದ್ರ ಅವರ ಸಾವಿನ ವಿಷಯದಲ್ಲಿ ಸರ್ಕಾರಕ್ಕೆ ಯಾರನ್ನು ಕೂಡ ರಕ್ಷಿಸುವ ಇಚ್ಛೆಯಿಲ್ಲ. ಯಾರೇ ತಪ್ಪು ಮಾಡಿದರೂ ಅದಕ್ಕೆ ಕ್ಷಮೆಯಿಲ್ಲ. ದಯವಿಟ್ಟು ಪ್ರತಿಭಟಿಸುವುದನ್ನು ನಿಲ್ಲಿಸಿ, ಕಾರ್ಯಪ್ರವೃತ್ತರಾಗಿ ರೋಗಿಗಳ ಸಂಕಷ್ಟಕ್ಕೆ ನೆರವಾಗಿ ಎಂಬುದಾಗಿ ಹೇಳಿದ್ದಾರೆ.