ನವದೆಹಲಿ, ಆ. 22(DaijiworldNews/HR): ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದು, ಅವರಿಗೆ ತನ್ನ ವಿರುದ್ಧ ನೀಡಲಾಗಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಭಾರತೀಯ ವಕೀಲರನ್ನು ನೇಮಕ ಮಾಡಬೇಕು ಎಂದು ಭಾರತ ಸರ್ಕಾರ ಮತ್ತೆ ಒತ್ತಾಯಿಸುತ್ತಿದೆ.
ಬೇಹುಗಾರಿಕೆಯ ಸುಳ್ಳು ಆರೋಪದಲ್ಲಿ ಬಂಧಿಯಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಜಾಧವ್ರನ್ನು ಮುಕ್ತವಾಗಿ ಹಾಗೂ ನ್ಯಾಯೋಚಿತವಾಗಿ ವಿಚಾರಣೆ ಮಾಡಬೇಕಿದೆ. ಹಾಗಾಗಿ ಅವರಿಗೆ ಭಾರತೀಯ ವಕೀಲರನ್ನು ನೇಮಕ ಮಾಡಬೇಕು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಪಾಕಿಸ್ತಾನ ಮಿಲಿಟರಿ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಜಾಧವ್ಗೆ ತನ್ನ ತೀರ್ಪಿನ ವಿರುದ್ದ ಇಸ್ಲಾಮಾಬಾದ್ ಹೈ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ. ಆದ ಕಾರಣ ಜಾಧವ್ ಪರ ಪಾಕಿಸ್ತಾನದ ವಕೀಲ ಇದ್ದರೆ ಪಾಕ್ ಸರ್ಕಾರ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಭಾರತೀಯ ವಕೀಲರ ನೇಮಕ ಮಾಡಬೇಕು ಎಂದು ಭಾರತ ಸರ್ಕಾರ ಒತ್ತಾಯಿಸಿದೆ.