ನವದೆಹಲಿ,ಆ. 22(DaijiworldNews/HR): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ, ಅವರು ಸಂಪೂರ್ಣ ಕೋಮಾಕ್ಕೆ ಜಾರಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ದೆಹಲಿಯ ಆರ್ಮಿ ರಿಸರ್ಚ್ ಆಯಂಡ್ ರೆಫೆರಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಮುಖರ್ಜಿ ಅವರನ್ನು ವೆಂಟಿಲೇಟ್ ಸಹಾಯದಲ್ಲೇ ಇಡಲಾಗಿದ್ದು, ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆಗಸ್ಟ್ 10ರಂದು ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಸೇನಾ ಸಂಶೋಧನಾ ಹಾಗೂ ರೆಫರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ಉದ್ಭವವಾಗಿತ್ತು. ತುರ್ತಾಗಿ ಮೆದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಅದಾದ ಬಳಿಕ ಬ್ರೇನ್ ಸರ್ಜರಿ ಮಾಡಲಾಗಿತ್ತು.