ನವದೆಹಲಿ, ಆ. 22 (DaijiworldNews/MB) : ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ದರ ಏರಿಸುತ್ತಿದ್ದು ಕಳೆದ ಆರು ದಿನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 92 ಪೈಸೆಯಷ್ಟು ಏರಿಕೆ ಮಾಡಿದೆ. ಕೊರೊನಾ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಜನರಿಗೆ ಮತ್ತಷ್ಟು ಹೊರೆಯಾಗಿದ್ದು ಜನ ಸಾಮಾನ್ಯರು ಪೆಟ್ರೋಲ್ ದರ ಏರಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್ ಡಿಸೇಲ್ ದರ ಏರಿಕೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ತುತ್ತಾಗಿದ್ದು ಇದೀಗ ಮತ್ತೆ ಕಳೆದ ಆರು ದಿನಗಳಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪೆಟ್ರೋಲ್ ದರ ಏರಿಕೆ ಮಾಡುತ್ತಿದ್ದು ಜನರು ಮತ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಸಂದರ್ಭದಲ್ಲಿ ಪೆಟ್ರೋಲ್ ದರ ಏರಿಕೆ ಮಾಡುವುದು ಸರಿಯಲ್ಲಿ ಎಂಬುದು ಜನರ ಆಕ್ಷೇಪವಾಗಿದೆ.
ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ, 17ರಂದು 16 ಪೈಸೆ, 18ರಂದು 17 ಪೈಸೆ, 20ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 10 ಪೈಸೆ, 21ರಂದು 19 ಪೈಸೆ, ಇಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 16 ಪೈಸೆ ಏರಿಸಲಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 81 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ 83.83 ರುಪಾಯಿ ಇದೆ.
ಜೂನ್ ತಿಂಗಳಲ್ಲಿ ಬರೋಬ್ಬರಿ 23 ದಿನ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಬಳಿಕ ಜುಲೈ 7ರಂದು ಪ್ರತಿ ಲೀಟರ್ ಡೀಸೆಲ್ ಗೆ 25 ಪೈಸೆ, ಜುಲೈ 12ರಂದು 16 ಪೈಸೆ, ಜುಲೈ 13ರಂದು 11 ಪೈಸೆ, ಜುಲೈ 15ರಂದು 13 ಪೈಸೆ, ಜುಲೈ 17ರಂದು 17 ಪೈಸೆ, ಜುಲೈ 18ರಂದು ಮತ್ತೆ 17 ಪೈಸೆ, ಜುಲೈ 20ರಂದು 12 ಪೈಸೆ ಹಾಗೂ ಜುಲೈ 26ರಂದು 15 ಪೈಸೆ ಏರಿಸಲಾಗಿತ್ತು. ಈಗ ಆಗಸ್ಟ್ ನಲ್ಲಿ ಮತ್ತೆ ಏರಿಕೆ ಮಾಡಲಾಗುತ್ತಿದೆ.
ಇನ್ನು ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಒಡೆತನದ ತೈಲ ಮತ್ತು ಅನಿಲ ಉತ್ಪಾದಕ ಆಯಿಲ್ ಇಂಡಿಯಾ ಲಿಮಿಟೆಡ್(ಒಐಎಲ್) ಕಂಪನಿ ಕಚ್ಚಾ ತೈಲ ಬೆಲೆಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾದ ಬಳಿಕ ಇತಿಹಾಸದಲ್ಲಿ ಎರಡನೇ ಬಾರಿಗೆ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಒಐಎಲ್ ಹಣಕಾಸು ನಿರ್ದೇಶಕರು, 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 248 ಕೋಟಿರೂಪಾಯಿ ನಿವ್ವಳ ನಷ್ಟ ದಾಖಲಿಸಿದೆ. ಇದು ಒಐಎಲ್ ಇತಿಹಾಸದಲ್ಲೇ ಎರಡನೇ ತ್ರೈಮಾಸಿಕ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.