ಚೆನ್ನೈ, ಆ. 22 (DaijiworldNews/MB) : ಇತ್ತೀಚೆಗೆ ಆನ್ಲೈನ್ ಮೂಲಕ ನಡೆದ ವರ್ಚುವಲ್ ಸಭೆಯೊಂದರಲ್ಲಿ ಆಯುಷ್ ಕಾರ್ಯದರ್ಶಿ, ವೈದ್ಯ ರಾಜೇಶ್ ಕೊಟೆಚ, ಹಿಂದಿ ಭಾಷೆ ಗೊತ್ತಿಲ್ಲದಿದ್ರೆ ಸಭೆಯಿಂದ ಹೊರಹೋಗಬಹುದು ಎಂದು ಹೇಳಿದ್ದು ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಡಿಎಂಕೆ ಸಂಸದೆ ಕನಿಮೋಳಿ ಅವರು, ಆಯುಷ್ ಕಾರ್ಯದರ್ಶಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದು ಆಯುಷ್ ಕಾರ್ಯದರ್ಶಿಯವರ ಮಾತಿನಲ್ಲಿ ಹಿಂದಿ ಏರಿಕೆ ಎದ್ದು ಕಾಣುತ್ತಿದೆ. ಇದು ಖಂಡನಾರ್ಹ. ಅವರು ವಿರುದ್ದ ಶೀಘ್ರ ಕ್ರಮ ಕೈಗೊಳ್ಳಬೇಕು. ಹಿಂದಿಯೇತರ ಜನರನ್ನು ಹೀಗೆ ತುಚ್ಛವಾಗಿ ಕಾಣುವುದನ್ನು ನಾವು ಎಷ್ಟು ಸಮಯ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ತಮಿಳು ಅಥವಾ ಇಂಗ್ಲಿಷ್ನಲ್ಲಿ ಮಾತನಾಡುವಂತೆ ಹೇಳಿದ್ದ ಕನಿಮೋಳಿ ಅವರಿಗೆ ನೀವು ಭಾರತೀಯರೇ? ಎಂದು ಸಿಬ್ಬಂದಿ ಪ್ರಶ್ನಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಹಿಂದಿ ಹೇರಿಕೆಯ ಬಗ್ಗೆ ತಮಿಳುನಾಡಿನಲ್ಲಿ ಆಕ್ರೋಶ ಭುಗಿಲೆದ್ದಿದೆ.
ಇನ್ನು ಹಿಂದಿ ಭಾಷೆ ಹೇರಿಕೆ ವಿರುದ್ದ ಧ್ವನಿ ಎತ್ತಿರುವ ಮಾಜಿ ಕೇಂದ್ರ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು, ಹಿಂದಿ ಭಾಷೆಯಲ್ಲೇ ನಡೆಯುವ ಆಯುಷ್ ತರಬೇತಿಯಲ್ಲಿ ತಮಿಳುನಾಡು ಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದೆ. ಆಯುಷ್ ಕಾರ್ಯದರ್ಶಿ ಅವರಿಗೆ ಇಂಗ್ಲೀಷ್ ಬರುವುದಿಲ್ಲ ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ ಹಿಂದಿ ತಿಳಿಯದಿದ್ದರೆ ಹೊರ ಹೋಗಿ ಎಂದು ಹೇಳುವುದು ಹಾಗೂ ಹಿಂದಿಯಲ್ಲೇ ಮಾತನಾಡುವಂತೆ ಒತ್ತಡ ಹೇರುವುದು ದುರಹಂಕಾರವಾಗಿದೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.