ನವದೆಹಲಿ, ಆ. 22 (DaijiworldNews/MB) : ಕೊರೊನಾ ನೆಪ ಹೇಳಿ ಅಂತರರಾಜ್ಯ ಮತ್ತು ಅಂತರ ಜಿಲ್ಲೆಗಳ ಸಂಚಾರಕ್ಕೆ ನಿರ್ಬಂಧ ಹೇರಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಈ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದ ಮೂಲಕ ತಿಳಿಸಿರುವ ಕೆಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ಸಂಚಾರ ನಿರ್ಬಂಧ ಹೇರುವುದರಿಂದ ಪೂರೈಕೆ ಸರಪಳಿ, ಆರ್ಥಿಕ ಚಟುವಟಿಕೆ, ಉದ್ಯೋಗಗಳಿಗೆ ಸಮಸ್ಯೆ ಉಂಟಾಗುತ್ತದೆ. ಹಾಗೆಯೇ ''ಅನ್ಲಾಕ್ 3.0'' ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು ಹಾಗೆಯೇ ಈ ಪತ್ರದಲ್ಲಿ ಅಂತರರಾಜ್ಯ, ಅಂತರ ಜಿಲ್ಲೆ ಪ್ರಯಾಣಕ್ಕೆ ಪ್ರತ್ಯೇಕ ಅನುಮತಿ ಪಡೆಯುವುದು, ಇ–ಪರ್ಮಿಟ್ ಪಡೆಯುವ ಅಗತ್ಯವಿಲ್ಲ ಎಂದು ಕೂಡಾ ತಿಳಿಸಿದೆ.
ರಾಜ್ಯ ಸರ್ಕಾರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಿರುವ ಕಾರಣ ಸರಕು ಸಾಗಾಟ ಹಾಗೂ ಸೇವೆಗಳನ್ನು ಒದಗಿಸಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ಗೃಹ ಇಲಾಖೆ ಈ ಪತ್ರ ಬರೆದಿದೆ.
ಕೊರೊನಾ ಸೋಂಕು ನಿಯಂತ್ರಣ ಮಾಡಲು ಮಾರ್ಚ್ 25ರಂದು ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ಡೌನ್ ಘೋಷಿಸಿದ್ದು ಈ ಲಾಕ್ಡೌನ್ ತೆರವು ಪ್ರಕ್ರಿಯೆ ಜೂನ್ನಲ್ಲಿ ಆರಂಭಗೊಂಡಿದೆ. ಬಳಿಕ ಹಂತಹಂತವಾಗಿ ಲಾಕ್ಡೌನ್ ತೆರವಿಗೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಸದ್ಯ ಲಾಕ್ಡೌನ್ ತೆರವು ಪ್ರಕ್ರಿಯೆಯ ಮೂರನೇ ಹಂತ (ಅನ್ಲಾಕ್ 3.0) ಜಾರಿಯಲ್ಲಿದ್ದು, ಆಗಸ್ಟ್ 30ಕ್ಕೆ ಕೊನೆಗೊಳ್ಳಲಿದೆ.