ಶ್ರೀನಗರ, ಆ. 23(DaijiworldNews/HR): ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಸುದ್ದಿಗಳು ಗರಿಗೆದರುತ್ತಿದ್ದು,ಮಹತ್ವದ ಬೆಳವಣಿಗೆಯೊಂದರಲ್ಲಿ ಆರು ರಾಜಕೀಯ ಪಕ್ಷಗಳು ಮೈತ್ರಿಗೆ ಮುಂದಾಗಿದೆ.
ಜಮ್ಮು-ಕಾಶ್ಮೀರಕ್ಕೆ ಸಿಗಬೇಕಾದ ವಿಶೇಷ ಸ್ಥಾನಮಾನ ಮತ್ತೆ ಸಿಗುವಂತೆ ಮಾಡಬೇಕು ಇದರ ಜೊತೆಗೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡುವಂತೆ ಆಗ್ರಹಿಸಬೇಕೆಂಬುದು ಈ ರಾಜಕೀಯ ಮಹಾ ಮೈತ್ರಿಯ ಹಿಂದಿನ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.
ಇದೀಗ ಕಾಂಗ್ರೆಸ್ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಪೀಪಲ್ಸ್ ಕಾನ್ಫರೆನ್ಸ್, ಸಿಪಿಎಂ, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
ಈ ಆರು ಪಕ್ಷಗಳು ಒಟ್ಟಾಗಿ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, 2019ರ ಆ.05 ರಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದತಿ ಹಾಗೂ ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ಕ್ರಮ ದುರದೃಷ್ಟಕರವಾಗಿದ್ದು, ಆರ್ಟಿಕಲ್ 370 ಮರು ಸ್ಥಾಪನೆ, ಹಾಗೂ ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿ ಪಡೆಯುವುದಕ್ಕೆ ಹೋರಾಡುವುದಾಗಿ ತಿಳಿಸಿವೆ.