ನವದೆಹಲಿ, ಆ. 23(DaijiworldNews/HR): ಕೇಂದ್ರ ಸರ್ಕಾರ ಲಡಾಖ್ ಸಂಘರ್ಷದ ಬಳಿಕ ಚೀನಾಗೆ ಒಂದರ ಮೇಲೊಂದರಂತೆ ಶಾಕ್ ನೀಡುತ್ತಿದ್ದು, ಚೀನಾದ ಆರ್ಥಿಕ ಬುಡಕ್ಕೇ ಪೆಟ್ಟು ನೀಡುವ ಸಲುವಾಗಿ ಇದೀಗ ಡಿಜಿಟಲ್ ಗೇಮಿಂಗ್ ಕ್ಷೇತ್ರವನ್ನು ಭಾರತ ಮುನ್ನಡೆಸುವಂತಾಗಬೇಕು. ದೇಶದಲ್ಲಿ ಆಟಿಕೆ ಉತ್ಪಾದನೆ ಹೆಚ್ಚಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ಕರೆದಿದ್ದು, ಸಭೆಯಲ್ಲಿ ಭಾರತೀಯ ಆಟಿಕೆ ತಯಾರಿಕಾ ವಲಯದ ಉತ್ತೇಜನದ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದರ ಜತೆಗೆ ತಂತ್ರಜ್ಞಾನ ಹಾಗೂ ಅನ್ವೇಷಣೆಗಳನ್ನು ಸರಿಯಾಗಿ ಬಳಸಿಕೊಳ್ಳುವುದರತ್ತಲೂ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ಸಭೆಯ ಬಳಿಕ ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಭಾರತೀಯ ಗೊಂಬೆಗಳು ಮತ್ತು ಆಟಿಕೆಗಳ ಉತ್ಪಾದನೆಗೆ ಉತ್ತೇಜನ ನೀಡಿ ಜಾಗತಿಕವಾಗಿ ಖ್ಯಾತಿ ಹೆಚ್ಚಿಸುವ ಮಾರ್ಗಗಳನ್ನು ಚರ್ಚಿಸಲು ಹಿರಿಯ ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು ಎಂದಿದ್ದಾರೆ.
ಭಾರತವು ಅನೇಕ ಆಟಿಕೆ ಸಮೂಹಗಳಿಗೆ ಮೂಲ ನೆಲೆಯಾಗಿದ್ದು, ಸ್ಥಳೀಯ ಆಟಿಕೆಗಳನ್ನು ಉತ್ಪಾದಿಸುವ ಸಾವಿರಾರು ಕುಶಲಕರ್ಮಿಗಳು ಸಾಂಸ್ಕೃತಿಕ ಸಂಪರ್ಕವನ್ನು ಹೊಂದಿರುವುದಲ್ಲದೆ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಜೀವನ ಕೌಶಲ್ಯ ಹಾಗೂ ಮನೋಶಕ್ತಿ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತಿದ್ದಾರೆ. ಇಂತಹ ಸಮೂಹಗಳನ್ನು ಹೊಸದಾಗಿ ಮತ್ತು ಸೃಜನಶೀಲ ವಿಧಾನಗಳ ಮೂಲಕ ಉತ್ತೇಜಿಸಬೇಕು ಮತ್ತು ಭಾರತೀಯ ಆಟಿಕೆ ಮಾರುಕಟ್ಟೆಯು ಪರಿವರ್ತಕ ಬದಲಾವಣೆ ತರುವ ಸಾಮರ್ಥ್ಯವನ್ನು ಹೊಂದಿದೆ. ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ‘ಲೋಕಲ್ ಟು ವೋಕಲ್’ ಪ್ರಚಾರ ಮಾಡುವ ಮೂಲಕ ಉದ್ಯಮದಲ್ಲಿ ಪರಿವರ್ತಕ ಬದಲಾವಣೆಯನ್ನು ತರಬಹುದು ಎಂದು ತಿಳಿಸಿದರು.
ಇನ್ನುಮಾರ್ಚ್ ನಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಭಾರತದ ಆಟಿಕೆ ತಯಾರಿಕಾ ಮತ್ತು ವ್ಯಾಪಾರ ವಲಯಕ್ಕೆ ಬರೊಬ್ಬರಿ 10 ಸಾವಿರ ಕೋಟಿ ರೂ ನಷ್ಟವಾಗಿದ್ದು,ಈ ಪೈಕಿ ಚೀನಾ ಮೂಲದ ಆಟಿಕೆ ತಯಾರಕರೇ ಮುಂದಿದ್ದಾರೆ. ಭಾರತದಲ್ಲಿ ವ್ಯಾಪಾರವಾಗುವ ಒಟ್ಟಾರೆ ಆಟಿಕೆಗಳ ಪೈಕಿ ಚೀನಾ ಮೂಲದ ಆಟಿಕೆಗಳ ಪ್ರಮಾಣವೇ ಶೇ.90ರಷ್ಟಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.