ನವದೆಹಲಿ, ಆ. 23 (DaijiworldNews/MB) : ಕೇಂದ್ರ ಸರ್ಕಾರವು ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳ ಚಿತ್ರೀಕರಣಗಾಗಿ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಅವರು ಇದನ್ನು ಪ್ರಕಟಿಸಿದ್ದಾರೆ.
ಅಭಿನಯಿಸುವವರು ಅಲ್ಲದೇ, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕೂಡಾ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಚಿತ್ರೀಕರಣದ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡತಕ್ಕದು. ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ಮಾರ್ಗಸೂಚಿಯನ್ನು ಆರೋಗ್ಯ ಸಚಿವಾಲಯದ ಜೊತೆಗೆ ಸಮಾಲೋಚಿಸಿ ಅಭಿವೃದ್ದಿ ಪಡಿಸಲಾಗಿದೆ. ಸಿನಿಮಾ, ಟಿವಿ ಧಾರವಾಹಿಗಳು ಪುನರ್ ಆರಂಭದಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಭರವಸೆ ಇದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಇನ್ನು ಮಾರ್ಗಸೂಚಿಯಲ್ಲಿ ಚಿತ್ರೀಕರಣದ ಸ್ಥಳ, ರೆಕಾರ್ಡಿಂಗ್ ಸ್ಟುಡಿಯೋ ಹಾಗೂ ಸಂಕಲನ ಮಾಡುವ ಸ್ಥಳದಲ್ಲಿ 6 ಗಜ ಅಂತರ ಕಡ್ಡಾಯ. ಚಿತ್ರೀಕರಣದ ಸಂದರ್ಭದಲ್ಲಿ ಕನಿಷ್ಟ ಮಂದಿ ಇರಬೇಕು. ಹಾಗೆಯೇ ಶೂಟಿಂಗ್ ಸೆಟ್ಟ್, ಮೇಕಪ್ ರೂಮ್, ವ್ಯಾನ್, ಶೌಚಾಲಯಗಳನ್ನು ಮತ್ತು ಬಳಸಿದ ಎಲ್ಲಾ ವಸ್ತುಗಳನ್ನು ಸ್ಯಾನಿಟೈಝ್ ಮಾಡುವುದು ಕಡ್ಡಾಯವಾಗಿದೆ. ಹಾಗೆಯೇ ಮಾಸ್ಕ್, ಪಿಪಿಇ ಕಿಟ್ಗಳನ್ನು ಇರಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಇನ್ನು ಮೇಕಪ್ ಮಾಡುವವರು ಪಿಪಿಇ ಕಿಟ್ ಧರಿಸಬೇಕು ಎಂದು ತಿಳಿಸಲಾಗಿದೆ.
ದೇಶದಲ್ಲಿ ಕೊರೊನಾವೈರಸ್ ಲಾಕ್ಡೌನ್ ಬಳಿಕ ಸಿನಿಮಾ, ಟಿವಿ ಧಾರವಾಹಿಗಳ ಚಿತ್ರೀಕರಣವನ್ನು ರದ್ದುಪಡಿಸಲಾಗಿತ್ತು.