ರಾಯಚೂರು, ಆ. 23 (DaijiworldNews/MB) : ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಓಪೆಕ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡದ ಒಳಗೆ ಹಂದಿಗಳ ದಂಡು ನುಗ್ಗಿ ತ್ಯಾಜ್ಯದ ಚೀಲಗಳನ್ನು ಕಿತ್ತು ತಿನ್ನುವ ವಿಡಿಯೋ ಇದೀಗ ವೈರಲ್ ಆಗಿದ್ದು ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಂದಿಗಳನ್ನು ಹಿಡಿದು ಹೊರಗೆ ಹಾಕುವಂತೆ ಸೂಚಿಸಿದೆ.
ಕೊರೊನಾ ರೋಗಿಯ ಸಂಬಂಧಿಯೋರ್ವರು ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಯನ್ನು ವಿಡಿಯೋ ಮೂಲಕ ಸೆರೆಹಿಡಿದಿದ್ದಾರೆ. ಹಾಗೆಯೇ ಇಂಥ ಅಸ್ತವ್ಯಸ್ಥ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ನನ್ನ ತಂದೆಗೆ ಚಿಕಿತ್ಸೆ ನೀಡಲು ಹೇಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕ್ಯಾಂಪಸ್ನಲ್ಲಿ ಸಾಮಾನ್ಯವಾಗಿ ಹಂದಿಗಳು ಓಡಾಡುತ್ತಲ್ಲೇ ಇತ್ತು ಎಂದು ಹೇಳಲಾಗಿದ್ದು, ಈಗ ಕೊರೊನಾ ವಾರ್ಡ್ನ ಕಟ್ಟಡದ ಒಳಗೆ ಇರುವ ತ್ಯಾಜ್ಯಗಳ ಚೀಲಗಳನ್ನು ಹಂದಿಗಳು ಎಳೆದು ತಿನ್ನುವ ವಿಡಿಯೋ ವೈರಲ್ ಆಗಿದೆ. ಇನ್ನು ಈ ವಿಡಿಯೋ ಶನಿವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೂಡಲೇ ಎಚ್ಚೆತ್ತ ಜಿಲ್ಲಾಡಳಿತ ಭಾನುವಾರ ಬೆಳಗ್ಗೆಯೇ ಹಂದಿಗಳನ್ನು ಹಿಡಿಯುವ ಕಾರ್ಯಚರಣೆ ನಡೆಸಿದೆ ಎಂದು ವರದಿ ತಿಳಿಸಿದೆ.
ಹಾಗೆಯೇ ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವು ಸೂಚಿಸಿದೆ ಎಂದು ವರದಿ ತಿಳಿಸಿದೆ.