ಉತ್ತರಪ್ರದೇಶ, ಆ. 23(DaijiworldNews/HR): ದೆಹಲಿಯಲ್ಲಿ ಶನಿವಾರ ಬಂಧಿತನಾಗಿದ್ದಂತ ಐಸಿಸ್ ಶಂಕಿತ ಉಗ್ರ ಅಬು ಯೂಸುಫ್ ಸ್ವಗ್ರಾಮ ಉತ್ತರ ಪ್ರದೇಶದ ಬಲರಾಂ ಪುರದಲ್ಲೂ ಭದ್ರತಾ ಸಿಬ್ಬಂದಿಗಳು ಶೋಧ ನಡೆಸಿದ್ದಾರೆ. ಈ ವೇಳೆ ಉಗ್ರನ ಮನೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗಾಗಿ ತಯಾರಿಸಿದ್ದ ಜಾಕೆಟ್ ಸೇರಿದಂತೆ ಭಾರೀ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿದೆ.
ದೆಹಲಿಯಲ್ಲಿ ಬಂಧಿಸಲ್ಪಟ್ಟಿದ್ದಂತ ಶಂಕಿತ ಐಸಿಸ್ ಉಗ್ರ ಅಬು ಯೂಸುಫ್ ಅವನ ಮನೆಯನ್ನು ಪೊಲೀಸರು, ಭದ್ರತಾ ಸಿಬ್ಬಂದಿಗಳು ಶೋಧ ನಡೆಸಿದ್ದು, ಆ ವೇಳೆ ಶೋಧ ಕಾರ್ಯಾಚರಣೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿಗಾಗಿ ತಯಾರಿಸಿದ್ದ ಜಾಕೆಟ್ ಸೇರಿದಂತೆ ಸ್ಪೋಟಕಗಳು ದೊರೆತಿವೆ. ಈ ಸಂಬಂಧ ಐಸಿಸ್ ಶಂಕಿತ ಉಗ್ರ ಯೂಸೂಪ್ ಅವರ ತಂದೆ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ದಿಲ್ಲಿ ಪೊಲೀಸ್ ಆಯುಕ್ತ ಪ್ರಮೋದ್ ಕುಶ್ವಾಹಾ, ಆತನ ಕಂದು ಬಣ್ಣದ ಜಾಕೆಟ್ನಲ್ಲಿ ಮೂರು ಸ್ಫೋಟಕಗಳು, ಇನ್ನು ನೀಲಿ ಬಣ್ಣದ ಜಾಕೆಟ್ನಲ್ಲಿ ನಾಲ್ಕು ಸ್ಫೋಟಕಗಳಿದ್ದವು. ಚರ್ಮದ ಬೆಲ್ಟ್ ಒಂದರಲ್ಲಿ 3 ಕೆಜಿ ಸ್ಫೋಟಕಗಳಿದ್ದವು ಎಂದು ತಿಳಿಸಿದ್ದಾರೆ.
ದಾಳಿ ಬಳಿಕ ಮಾತನಾಡಿದ ಉಗ್ರ ಅಬು ಯೂಸುಫ್ ಪತ್ನಿ, ತನ್ನ ಪತಿಯ ದುಷ್ಕೃತ್ಯವನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಮನೆಯಲ್ಲಿ ಗನ್ ಪೌಡರ್ ಸೇರಿದಂತೆ ಹಲವು ಸ್ಫೋಟಕಗಳನ್ನು ಸಂಗ್ರಹಿಸಿ ಇಡಲಾಗುತ್ತಿತ್ತು, ನಾನು ಅನೇಕ ಬಾರಿ ಇಂಥಾ ಕೆಲಸಗಳನ್ನು ಮಾಡಬೇಡಿ ಎಂದು ಹೇಳಿದರೂ, ನನ್ನ ಮಾತನ್ನು ಕೇಳುತ್ತಿರಲಿಲ್ಲ ಎಂದು ಮಾಹಿತಿ ನೀಡಿರುವ ಆತನ ಪತ್ನಿ, ನನ್ನ ಪತಿಯನ್ನು ಕ್ಷಮಿಸಿ, ನಮಗೆ ನಾಲ್ವರು ಮಕ್ಕಳಿದ್ದಾರೆ, ನಾನು ಎಲ್ಲಿಗೆ ಹೋಗಲಿ ಎಂದು ಬೇಡಿಕೊಂಡಿದ್ದಾರೆ.