ತಿರುವನಂತಪುರಂ, ಆ. 23 (DaijiworldNews/MB) : ''ಸುಮಾರು ಎರಡೂವರೆ ತಿಂಗಳು ನನ್ನ ಕುಟುಂಬವನ್ನು ಭೇಟಿ ಮಾಡಿರಲಿಲ್ಲ. ಎರಡುವರೆ ತಿಂಗಳ ಬಳಿಕ ಒಂದು ಬಾರಿ ಮಾತ್ರ ನನ್ನ ಕುಟುಂಬದವರನ್ನು ಭೇಟಿಯಾಗಲು ಸಾಧ್ಯವಾಯಿತು'' ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ''ನಾವು 'ಬ್ರೇಕ್ ದಿ ಚೈನ್ ಆರಂಭ ಮಾಡಿದ್ದರಿಂದ ವೈಯಕ್ತಿಕವಾಗಿ ನಾನು ಯಾವುದೇ ಮಾರ್ಗಸೂಚಿಯನ್ನು ಮೀರದಂತೆ ನೋಡಿದ್ದೇನೆ. ನಾನು ದೈಹಿಕ ಅಂತರ ಕಾಪಾಡಿಕೊಳ್ಳುತ್ತೇನೆ, ಮಾಸ್ಕ್ ಧರಿಸುತ್ತೇನೆ, ಕೈ ತೊಳೆದುಕೊಳ್ಳುತ್ತೇನೆ ಮತ್ತು ಸ್ಯಾನಿಟೈಸರ್ ಅನ್ನು ಆಗಾಗೆ ಬಳಸುತ್ತೇನೆ'' ಎಂದು ಹೇಳಿದ್ದಾರೆ.
''ನಾನು ಕಚೇರಿಯಲ್ಲಿ ಒಬ್ಬಳೇ ಇರುವಾಗಲೂ ಮಾಸ್ಕ್ ತೆಗೆಯುವುದಿಲ್ಲ. ಜನರೊಂದಿಗೆ ಮಾತನಾಡುವಾಗ ಎರಡು ಮೀಟರ್ ಅಂತರವನ್ನು ಕಾಪಾಡಿಕೊಳ್ಳುತ್ತೇನೆ. ಆದರೂ ನಿಮಗೆ ತಿಳಿದಿಲ್ಲ, ನೀವು ಎಲ್ಲಿಂದಲಾದರೂ ವೈರಸ್ಗೆ ತುತ್ತಾಗಬಹುದು'' ಎಂದು ಅವರು ಹೇಳುತ್ತಾರೆ.
ತನ್ನ ಕುಟುಂಬ ಜೀವನದ ಬಗ್ಗೆ ಮಾತನಾಡಿದ ಅವರು, ''ಮನೆಯವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ, ವೀಡಿಯೊ ಕರೆಗಳ ಮೂಲಕ ಸಂಪರ್ಕದಲ್ಲಿರುತ್ತೇನೆ. ರಾತ್ರಿ 10 ಗಂಟೆಯ ನಂತರವೇ ನನ್ನ ಮನೆಗೆ ತಲುಪುತ್ತೇನೆ. ರಾತ್ರಿ 11 ರ ಸುಮಾರಿಗೆ ನನ್ನ ಕುಟುಂಬದೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡುತ್ತೇನೆ. ನನ್ನ ಕರೆಗಾಗಿ ನನ್ನ ಪತಿ, ಮಗ, ಸೊಸೆ, ಎರಡು ವರ್ಷ ಪ್ರಾಯದ ನನ್ನ ಮೊಮ್ಮಗಳು ಕಾಯುತ್ತಲೇ ಇರುತ್ತಾರೆ'' ಎಂದು ಹೇಳಿದ್ದಾರೆ.
''ನನ್ನ ಮೊಮ್ಮಗಳು ವೀಡಿಯೊ ಕರೆಗಳಲ್ಲಿ ತಾನು ಬಿಡಿಸಿರುವ ಚಿತ್ರಗಳನ್ನು ತೋರಿಸುತ್ತಾಳೆ. ಅವಳೊಂದಿಗೆ ಮಾತನಾಡುವುದು ನನ್ನ ಕೆಲಸದಲ್ಲಿನ ಒತ್ತಡದಿಂದ ಕೊಂಚ ಮನಸ್ಸು ಸಡಿಲಿಕೆ ಮಾಡಲು ಸಾಧ್ಯವಾಗುತ್ತದೆ. ಮನೆಯ ವಿಚಾರದ ಬಗ್ಗೆ ನನ್ನ ಪತಿಯೊಂದಿಗೆ ಮಾತನಾಡುತ್ತೇನೆ. ಹಾಗೆಯೇ ಅಬುಧಾಬಿಯಲ್ಲಿ ವಾಸವಿರುವ ನನ್ನ ಹಿರಿಯ ಮಗ, ಸೊಸೆ, ಹಾಗೂ ಮೂರು ವರ್ಷದ ಮೊಮ್ಮಗನೊಂದಿಗೆ ಮಾತನಾಡುತ್ತೇನೆ'' ಎಂದು ತಿಳಿಸಿದ್ದಾರೆ.
''ಬಳಿಕ ನಾನು ಪತ್ರಿಕೆಯಲ್ಲಿರುವ ಲೇಖನಗಳು ಮತ್ತು ಸಂಪಾದಕೀಯಗಳನ್ನು ಓದುತ್ತೇನೆ. ಕೆಲವೊಮ್ಮೆ, ನಾನು ಯೂಟ್ಯೂಬ್ನಲ್ಲಿ ವೀಡಿಯೊಗಳನ್ನು ನೋಡುತ್ತೇನೆ. ನಾನು ರಾತ್ರಿ ಸುಮಾರು 12.30-1ರ ಸುಮಾರಿಗೆ ನಿದ್ರೆ ಮಾಡುತ್ತೇನೆ. ಬೆಳಿಗ್ಗೆ 6 ಕ್ಕೆ ಎದ್ದು ಪುನಃ ದಿನದ ಕಾರ್ಯ ಆರಂಭಿಸುತ್ತೇನೆ'' ಎಂದು ತನ್ನ ದಿನಚರಿಯನ್ನು ವಿವರಿಸಿದ್ದಾರೆ.