ಹುಬ್ಬಳ್ಳಿ, ಆ. 23 (DaijiworldNews/MB) : ಜೈಲಿನಲ್ಲಿದ್ದು ಬಂದವರಿಗೆ ನೈತಿಕತೆಯ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಹುಬ್ಬಳ್ಳಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ಕಿಡಿಕಾರಿದ್ದಾರೆ.
ಫೋನ್ ಕದ್ದಾಲಿಕೆ ಬಗ್ಗೆ ಡಿಕೆಶಿ ಮಾಡಿರುವ ಆರೋಪದ ಕುರಿತಾಗಿ ಭಾನುವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಡಿಕೆಶಿ ಅವರು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು ಮಾಡಿದ ಭ್ರಷ್ಟಾಚಾರದ ಪ್ರಕರಣ ಇನ್ನೂ ಕೂಡಾ ಇತ್ಯರ್ಥವಾಗಿಲ್ಲ. ಜೈಲಿನಲ್ಲಿ ಇದ್ದ ಬಂದವರು ನೈತಿಕತೆಯ ಬಗ್ಗೆ ಮಾತನಾಡಬೇಕಾಗಿಲ್ಲ'' ಎಂದು ಟಾಂಗ್ ನೀಡಿದರು.
''ಕಾಂಗ್ರೆಸ್ನ ತುಷ್ಟೀಕರಣ ರಾಜಕೀಯ ದೇಶವನ್ನೇ ಹಾಳುಗೆಡವುತ್ತಿದೆ. ಗಲಭೆಕೋರರಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪರಿಹಾರ ಧನ ನೀಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಯಾವ ನಿಲುವು ಹೊಂದಿದೆ'' ಎಂದು ಪ್ರಶ್ನಿಸಿದ ಅವರು, ''ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಮನೆ ಮೇಲೆಯೇ ದಾಳಿಯಾಗಿದೆ. ಕಾಂಗ್ರೆಸ್ ಈ ಘಟನೆಯನ್ನು ಖಂಡನೆ ಮಾಡುವ ಬದಲು, ಗೂಂಡಾಗಳ ಜೊತೆಯಾಗಿ ಪೊಲೀಸ್ ಕಮಿಷನರ್ಗೆ ಧಮ್ಕಿ ಹಾಕಿದ್ದಾರೆ'' ಎಂದು ಆರೋಪ ಮಾಡಿದರು.
ಹಾಗೆಯೇ ''ರಾಜ್ಯದಲ್ಲಿ ಬಿಎಸ್ವೈ ನೇತೃತ್ವದ ಸರ್ಕಾರ ಸುಭದ್ರವಾಗಿದ್ದು ಸರ್ಕಾರದ ಯಶಸ್ಸನ್ನು ಸಹಿಸಲಾಗದೆ ವಿರೋಧಿಗಳು ಸುಳ್ಳು ಪ್ರಚಾರ, ಆರೋಪ ಮಾಡುತ್ತಿದ್ದಾರೆ'' ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.