ಬೆಂಗಳೂರು, ಆ. 23 (DaijiworldNews/MB) : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಫೋನ್ ಟ್ಯಾಪಿಂಗ್ ಬರೀ ಆರೋಪವಲ್ಲ, ಅದು ಸತ್ಯವಾಗಿದೆ. 15 ದಿನಗಳಿಂದ ಫೋನ್ ಕರೆ ವೇಳೆ ಅಡಚಣೆ ಉಂಟಾಗುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸದಿದ್ದರೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಪೋನ್ ಟ್ಯಾಪಿಂಗ್ ವಿಚಾರಕ್ಕೆ ಸಂಬಂಧಿಸಿ ಕೆಲವರು ದೂರು ನೀಡುವಂತೆ ಹೇಳಿದರು. ಅದರಂತೆ ಈಗ ದೂರು ನೀಡಿದ್ದೇವೆ. ಒಂದು ಪಕ್ಷದ ಅಧ್ಯಕ್ಷರು ಫೋನ್ ಟ್ಯಾಪಿಂಗ್ ಬಗ್ಗೆ ದೂರು ನೀಡಿರುವಾಗ ಅದನ್ನು ಅಸಡ್ಡೆಯಿಂದ ಕಾಣುವುದು ಸರಿಯಲ್ಲ. ಗೃಹಸಚಿವ ಬೊಮ್ಮಾಯಿಯವರು ಈ ಬಗ್ಗೆ ತೀರಾ ಲಘುವಾಗಿ ಮಾತನಾಡಬಾರದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು'' ಎಂದು ಡಿ.ಕೆ ಸುರೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇನ್ನು ಬಿಜೆಪಿ ನಾಯಕರು ಗೂಬೆ ಕೂರಿಸುವುದರಲ್ಲಿ ಬಹಳ ಪರಿಣಿತಿಯನ್ನು ಹೊಂದಿದ್ದಾರೆ. ಡಿ.ಜೆ. ಹಳ್ಳಿ ಪ್ರಕರಣಕ್ಕೂ ಈ ಫೋನ್ ಟ್ಯಾಪಿಂಗ್ಗೂ ಯಾವುದೇ ಸಂಬಂಧವಿಲ್ಲ. ಆದರೆ ಸರ್ಕಾರ ಗಲಭೆಯ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಈ ಪ್ರಕರಣವನ್ನು ಬಳಸುವ ಯತ್ನ ಮಾಡುತ್ತಿದೆ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.