ನವದೆಹಲಿ, ಆ. 23 (DaijiworldNews/MB) : ತನ್ನದೇ ದೇಶ ಕೈಲಾಸ ಸ್ಥಾಪನೆ ಮಾಡಿದ್ದೇನೆ ಎಂದು ಹೇಳಿ ಆ ದೇಶಕ್ಕೆ ರಿಸರ್ವ್ ಬ್ಯಾಂಕ್ ಸ್ಥಾಪನೆ ಮಾಡಿ ಕರೆನ್ಸಿಗಳನ್ನು ಆಗಸ್ಟ್ 22 ರಂದು ಬಿಡುಗಡೆ ಮಾಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಇದೀಗ ತನ್ನ ದೇಶದಲ್ಲಿ ಕೈಲಾಸದ ಹಿಂದೂ ಸಂಸತ್ತನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಹಿಂದೂ ಸಂಸತ್ತು ಸ್ಥಾಪಿಸಿ 'ರಿಸರ್ವ್ ಬ್ಯಾಂಕ್ ಆಫ್ ಕೈಲಾಸ'ವನ್ನು ಮುನ್ನಡೆಸಲಾಗುವುದು ಎಂದು ಹೇಳಿದ್ದಾರೆ.
"ಗಣಪತಿಯ ಅನುಗ್ರಹದಿಂದ, ಹಿಂದೂ ಧರ್ಮ ಆಧಾರಿತ ಸಂಸ್ಥೆಗಳನ್ನು ನಿರ್ವಹಿಸಲು ಮಾದರಿ ಸರ್ಕಾರವನ್ನು ಸ್ಥಾಪಿಸಲು ಹಿಂದೂ ಧರ್ಮಕ್ಕಾಗಿ ಹಿಂದೂ ಸಂಸತ್ತನ್ನು ಸ್ಥಾಪಿಸಲು ನಾವು ಬಯಸುತ್ತೇವೆ" ಎಂದು ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಿಳಿಸಿದ್ದಾರೆ.
ಸಂಸತ್ತನ್ನು ಸ್ಥಾಪಿಸಲು ಆರು ತಿಂಗಳವರೆಗೆ ಕಾಲವಕಾಶ ಬೇಕಾಗುತ್ತದೆ. ಜನವರಿಯಲ್ಲಿ ಈ ಪ್ರಕ್ರಿಯೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಈ ಹಿಂದೂ ಸಂಸತ್ತು ಚಿಟ್ ಸಭಾ, ರಾಜಸಭಾ, ದೇವಸಭಾ, ಕನಗ ಸಭಾ ಮತ್ತು ನಿತ್ಯಾನಂದ ಸಭಾ ಎಂಬ ಐದು ಘಟಕಗಳನ್ನು ಹೊಂದಿರುತ್ತದೆ. ಈ ಎಲ್ಲಾ ಐದು ಘಟಕಗಳು ವೇದಗಳಲ್ಲಿ ಮತ್ತು 'ಅಗಮ'ಗಳಲ್ಲಿ' ಪರಮಾಶಿವ 'ಹೇಳಿದ್ದಂತೆ ಅನುಗುಣವಾಗಿ ಕಾರ್ಯ ನಿರ್ವಹಿಸಲಿದೆ. ಪ್ರತಿ ಸಭೆಯು 1,008 ಸದಸ್ಯರು ಇದ್ದು ದೇವಮಾನವರು ಈ ಸದಸ್ಯರು ವರ್ಷದಲ್ಲಿ ಎಷ್ಟು ಬಾರಿ ಸಭೆ ನಡೆಸಬೇಕು, ಸದಸ್ಯತ್ವದ ಅಧಿಕಾರಾವಧಿ ಮತ್ತು ಇತರ ಸೂಕ್ಷ್ಮ ವಿಚಾರಗಳನ್ನು ವಿವರಿಸುತ್ತಾರೆ.
"ಆರು ತಿಂಗಳಲ್ಲಿ ನಾವು ಸದಸ್ಯರ ಹೆಸರುಗಳು ಮತ್ತು ರಚನೆ, ಅದರ ತತ್ವಗಳು ಮತ್ತು ನೀತಿಗಳನ್ನು ಬಿಡುಗಡೆ ಮಾಡುತ್ತೇವೆ" ಎಂದು ಅನೇಕ ಅತ್ಯಾಚಾರ, ವಂಚನೆ ಆರೋಪಗಳನ್ನು ಹೊಂದಿರುವ ನಿತ್ಯಾನಂದ ಪ್ರತಿಪಾದಿಸಿದ್ದಾರೆ.
ಏತನ್ಮಧ್ಯೆ, ಅವರು ತಮ್ಮ ಕೈಲಾಸ ದೇಶಕ್ಕೆ ಉಚಿತ ಇ-ಪೌರತ್ವವನ್ನು ಪ್ರಾರಂಭಿಸಿದ್ದಾರೆ. ಜೊತೆಗೆ ಉಚಿತ ಇ-ಪಾಸ್ಪೋರ್ಟ್ ಅನ್ನು ನೀಡುವುದಾಗಿ ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿ ನಿತ್ಯಾನಂದ 2019 ರ ಅಕ್ಟೋಬರ್ನಲ್ಲಿ ಭಾರತದಿಂದ ಪರಾರಿಯಾಗಿರುವ ಬಗ್ಗೆ ಶಂಕಿಸಲಾಗಿದ್ದು ದಕ್ಷಿಣ ಅಮೆರಿಕದ ಈಕ್ವೇಡರ್ ಕರಾವಳಿಯ ದ್ವೀಪವೊಂದರಲ್ಲಿ ಆಶ್ರಯ ಪಡೆದಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ಆರೋಪಿ ನಿತ್ಯಾನಂದ ತಾನು ಈಕ್ವೇಡರ್ ದ್ವೀಪವನ್ನು ಖರೀದಿ ಮಾಡಿ ಕೈಲಾಸ ದೇಶ ಸ್ಥಾಪನೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಈಕ್ವೇಡಾರ್ನ ಸರ್ಕಾರ ನಾವು ಯಾವುದೇ ದ್ವೀಪವನ್ನು ಮಾರಾಟ ಮಾಡಿಲ್ಲ ಎಂದು ತಿಳಿಸಿದೆ.