ನವದೆಹಲಿ, ಆ 24 (DaijiworldNews/MSP): ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಗಾಳಿ ದಟ್ಟವಾಗಿ ಬೀಸತೊಡಗಿದೆ. ಈ ಹಿನ್ನಲೆಯಲ್ಲಿ ಇಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯು ಎಲ್ಲರ ಗಮನ ಸೆಳೆದಿದೆ.
ಈ ನಡುವೆ ಸಭೆಯ ಮುನ್ನವೇ ಪದತ್ಯಾಗದ ಸುಳಿವು ನೀಡಿರುವ ಸೋನಿಯಾ ಗಾಂಧಿ, ಸೂಕ್ತ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ ಎಂಬ ಸಂದೇಶ ರವಾನಿಸಿದ್ದಾರೆ. ಸ್ವಪಕ್ಷೀಯರಿಂದಲೇ ಗಾಂಧಿ ಕುಟುಂಬದ ನಾಯಕತ್ವದ ಕುರಿತು ಪ್ರಶ್ನೆ ಮಾಡಿರುವುದು ಸೋನಿಯಾ ಗಾಂಧಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದ್ದು, ಹೀಗಾಗಿ ನಾನಿನ್ನು ಮುಂದುವರಿಯಲಾರೆ ನೀವೆ ಚರ್ಚಿಸಿ ಸೂಕ್ತ ನಾಯಕನನ್ನು ಆರಿಸಿಕೊಳ್ಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಮುಂದಿನ ಅಧ್ಯಕ್ಷರು ಯಾರು ಆಗುವರು ಎನ್ನುವ ಬಗ್ಗೆ ಕುತೂಹಲ ಕೆರಳಿಸಿದ್ದು, ಒಂದಷ್ಟು ಮತ್ತು ರಾಹುಲ್ ಗಾಂಧಿ ಅವರ ಪರ ಒಲವು ವ್ಯಕ್ತಪಡಿಸಿದ್ರೆ , ಇನ್ನೊಂದಿಷ್ಟು ಮಂದಿ ಗಾಂಧಿ ಕುಟುಂಬದ ಹೊರಗಿವರು ನಾಯಕತ್ವ ವಹಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಪಟ್ಟ ಒಲಿಯುವುದೇ ಎಂಬ ವಿಚಾರ ರಾಜಕೀಯ ವಲಯದಲ್ಲಿ ಹರಿದಾಡತೊಡಗಿದೆ. ಪಕ್ಷ ಹಾಗೂ ಗಾಂಧಿ ಕುಟುಂಬ ನಿಷ್ಠೆ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಸೋನಿಯಾ ಗಾಂಧಿ ಕೂಡ ಒಳ್ಳೆಯ ಅಭಿಪ್ರಾಯ ಹೊಂದಿದ್ದು, ೫ ವರ್ಷ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಸಂಸತ್ನಲ್ಲಿ ಹೋರಾಟ ಮಾಡಿ ಖರ್ಗೆ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಒಟ್ಟಾರೆ ರಾಷ್ಟ್ರಮಟ್ಟದಲ್ಲಿ ಖರ್ಗೆ ಅವರು ಹೊಂದಿರುವ ಪ್ರಾಮುಖ್ಯತೆ ಮತ್ತು ವರ್ಚಸ್ಸು ಗಮನಿಸಿದರೆ ಇದು ನಿಜವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ