ನವದೆಹಲಿ, ಆ 24 (DaijiworldNews/MSP): ಚೀನಾದೊಂದಿಗೆ ಮಾತುಕತೆ ವಿಫಲವಾದರೆ, ಭಾರತಕ್ಕೆ "ಮಿಲಿಟರಿ ಆಯ್ಕೆ"ಗಳಿದ್ದು ಚೀನೀ ಸೈನ್ಯದ ಉಲ್ಲಂಘನೆ ಎದುರಿಸಲು ಸೇನೆ ತಯಾರಿದೆ ಎಂದು ಸೇನಾ ಮುಖ್ಯಸ್ಥ, ಜ| ಬಿಪಿನ್ ರಾವತ್ ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಸದ್ಯದ ಪರಿಸ್ಥಿತಿಯ ಕುರಿತು, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೂರ್ವ ಲಡಾಕ್ ನಲ್ಲಿ ಚೀನಾ ಸೇನೆಯ ಕಡೆಯಿಂದ ಉಲ್ಲಂಘನೆ, ಸಂಘರ್ಷಗಳನ್ನು ಎದುರಿಸಲು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆ ವಿಫಲವಾದರೆ,
ಮಿಲಿಟರಿ ಆಯ್ಕೆಗಳು ನಮ್ಮ ಮುಂದಿವೆ ಎಂದು ಅವರು ಹೇಳಿದ್ದಾರೆ. ಆದರೆ ಭಾರತ ಬಳಸಬಹುದಾದ ಮಿಲಿಟರಿ ಆಯ್ಕೆಗಳನ್ನು ವಿವರವಾಗಿ ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ಚೀನಾ ಹಾಗೂ ಭಾರತದ ಗಡಿ ಭಾಗದಲ್ಲಿ ಎರಡೂ ರಾಷ್ಟ್ರಗಳ ಸೈನಿಕರ ನಡುವೆ ಘರ್ಷಣೆ ನಡೆದು ಉಭಯ ರಾಷ್ಟ್ರಗಳ ಸೈನಿಕರು ಮೃತಪಟ್ಟಿದ್ದರು. ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಭಾರತ ಪ್ರಯತ್ನಿಸುತ್ತಿದ್ದು, ಈವರೆಗಿನ ಮಾತುಕತೆ ಅಂದುಕೊಳ್ಳುವಷ್ಟು ಮಟ್ಟಿಗೆ ಯಶ ಕಾಣಲಿಲ್ಲ.
ಗಡಿ ವಾಸ್ತವ ರೇಖೆಯ ಫಿಂಗರ್ ಪ್ರದೇಶ, ಗಲ್ವಾನ್ ಕಣಿವೆ, ಹಾಟ್ ಸ್ಟ್ರಿಂಗ್ ಮತ್ತು ಕೊಂಗ್ರುಂಗ್ ನಾಲಾ ಪ್ರದೇಶಗಳಲ್ಲಿ ಇನ್ನೂ ಚೀನಾದ ಸೇನಾಪಡೆಯಿದ್ದು, ಅಲ್ಲಿಂದ ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಚೀನಾ ನಿರಾಕರಿಸಿದೆ.