ಅಮರಾವತಿ, ಆ. 24 (DaijiworldNews/MB) : ನಾಯಕತ್ವ ವಿಚಾರದಲ್ಲಿ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ ಸಭೆ ಇಂದು ನಡೆದಿದ್ದು ಅಧ್ಯಕ್ಷರ ಬದಲಾವಣೆಯಾಗಲಿದೆಯೇ ಅಥವಾ ಸೋನಿಯಾ ಗಾಂಧಿಯೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದಾರೆಯೇ ಎಂಬ ಕುತೂಹಲ ಕೆರಳಿಸಿದೆ. ಇಂದು ನಡೆದ ಸಭೆಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಸೇರಿದಂತೆ ಹಲವು ನಾಯಕರು ಎಐಸಿಸಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರು ಮುಂದುವರೆಯುವಂತೆ ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸ್ಥಾನದಿಂದ ತನ್ನನ್ನು ಕೆಳಗಿಳಿಸುವಂತೆ ಸೋನಿಯಾ ಗಾಂಧಿಯವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ನ 23 ಮಂದಿ ನಾಯಕರು ಪಕ್ಷದ ನಾಯಕತ್ವ ಬದಲಾವಣೆಗೆ ಸಂಬಂಧಿಸಿ ಬರೆದಿರುವ ಪತ್ರವು ಇತ್ತೀಚೆಗೆ ಬಹಿರಂಗವಾಗಿದ್ದು ಇದಕ್ಕೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಾನು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವುದಾಗಿ ಹಾಗೂ ಗಾಂಧಿ ಕುಟುಂಬವನ್ನು ಹೊರತುಪಡಿಸಿ ಇತರರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕು ಎಂದು ಹೇಳಿದ್ದರು. ಹಾಗೆಯೇ ಸೋಮವಾರ ನಡೆಯುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದರು.
ಇದೀಗ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆ ನಡೆಯುತ್ತಿದ್ದು ಈ ಸಭೆಯಲ್ಲಿ ತಾನು ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವ ಇಂಗಿತವನ್ನು ಸೋನಿಯಾ ಗಾಂಧಿಯವರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮನ್ ಮೋಹನ್ ಅವರು ಪಕ್ಷದ ನಾಯಕತ್ವವನ್ನು ಸೋನಿಯಾ ಅವರೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿಯು ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿಯವರೇ ಪಕ್ಷದ ನಾಯಕತ್ವವನ್ನು ವಹಿಸಬೇಕು ಎಂದು ಒತ್ತಾಯ ಮಾಡಿದ್ದು ಇವರಿಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್ನಲ್ಲಿ ಪ್ರಬಲ ನಾಯಕತ್ವವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈಗಾಗಲೇ ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಅವರ ಪರ ಬ್ಯಾಟ್ ಬೀಸಿದ್ದು ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕತ್ವದಿಂದ ಕೆಳಗಿಳಿಯುವುದಾಗಿ ಪಕ್ಷದ ನಾಯಕರನ್ನು ಮನವಿ ಮಾಡಿರುವ ಸೋನಿಯಾ ಅವರು, ಗುಲಾಂ ನಬಿ ಅಜಾದ್ ಹಾಗೂ ಇತತರು ಬರೆದಿರುವ ಪತ್ರವನ್ನು ಉಲ್ಲೇಖಿಸಿದ್ದಾರೆ. ಹಾಗೆಯೇ ಈ ಪತ್ರವನ್ನು ಸಭೆಯಲ್ಲಿ ಓದಲಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲೇ ಪಕ್ಷದ ಆತಂರಿಕ ವಿಷಯವನ್ನು ಬಹಿರಂಗ ಮಾಡಿದ್ದಕ್ಕೆ ಪಕ್ಷದ ನಾಯಕರ ವಿರುದ್ದ ರಾಹುಲ್ ಗಾಂಧಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ.