ಬೆಂಗಳೂರು, ಆ. 24 (DaijiworldNews/MB) : ಈ ಹಿಂದೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲೇ ಮೊದಲು ಜಾರಿಗೊಳಿಸಲಾಗುವುದು ಎಂದು ಹೇಳಿದ್ದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಇದೀಗ ಈ ಶಿಕ್ಷಣ ನೀತಿ ಜಾರಿಗೆ ಬೇಕಾದ ಎಲ್ಲಾ ರೀತಿಯ ಆಡಳಿತಾತ್ಮಕ ಸುಧಾರಣೆ ಹಾಗೂ ಕಾನೂನು ತಿದ್ದುಪಡಿ ಕುರಿತಾಗಿ ಸರ್ಕಾರ ಸಿದ್ದತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯಾಂಶಗಳು ಮತ್ತು ಜಾರಿ ಕುರಿತಾಗಿ ಹಮ್ಮಿಕೊಂಡಿದ್ದ ಐದು ದಿನಗಳ ಆನ್ಲೈನ್ ಕಾರ್ಯಾಗಾರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಈ ಹೊಸ ಶಿಕ್ಷಣ ನೀತಿ ಜಾರಿ ಮಾಡಲು ಕರ್ನಾಟಕ ರಾಜ್ಯ ಸರ್ಕಾರವು ಮೊದಲಿನಿಂದಲೂ ಆಸಕ್ತಿಯನ್ನು ಹೊಂದಿದ್ದು ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲೇ ಈ ಶಿಕ್ಷಣ ನೀತಿ ಜಾರಿಯಾಗಲಿದೆ. ಕರಡು ಪ್ರತಿ ಕೈ ಸೇರಿದ ಕೂಡಲೇ ಸರ್ಕಾರವು ಈ ನೀತಿಯ ಜಾರಿಯ ಬಗ್ಗೆ ಎಲ್ಲಾ ಸಿದ್ದತೆಗಳನ್ನು ನಡೆಸುತ್ತಿದೆ. ಅದಕ್ಕಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ನೀತಿಯ ಜಾರಿಗೆ ಅಂತಿಮ ಹಂತದ ಶಿಫಾರಸುಗಳನ್ನು ನೀಡುವುದಷ್ಟೇ ಬಾಕಿ ಉಳಿದಿದ್ದು ಆ ಶಿಫಾರಸು ಬಂದ ಬಳಿಕ ಕೂಡಲೇ ಕರ್ನಾಟಕದಲ್ಲಿ ಈ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತದೆ ಎಂದು ಹೇಳಿರುವ ಡಿಸಿಎಂ, ಹಾಗೆಯೇ ಒಂದು ವರ್ಷದಲ್ಲಿ ಈ ನೀತಿಯ ಕುರಿತಾದ ಮಾಹಿತಿಯನ್ನು ನೀಡುವ ಆಂದೋಲನದಂತ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.