ನವದೆಹಲಿ, ಆ. 24(DaijiworldNews/HR): ಬಿಜೆಪಿ ಜೊತೆ ಶಾಮೀಲಾಗಿ ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವವರಿಗೆ ಬಿಜೆಪಿ ಸಹಕಾರವಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿದ್ದು, ಅದರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದ ಕುರಿತು ಬರೆಯಲಾಗಿದ್ದ ಪತ್ರದ ಕುರಿತು ರಾಹುಲ್ ಗಾಂಧಿ ಅವರು ಆಡಿದ ಮಾತುಗಳು ಹಿರಿಯ ನಾಯಕ ಕಪಿಲ್ ಸಿಬಲ್ ಅವರಿಗೆ ಅಸಮಾಧಾನವಾಗಿದೆ.
ಸೋನಿಯಾ ಗಾಂಧಿ ಅವಾರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗಲೇ ಉದ್ದೇಶಪೂರ್ವಕಾಗಿ ಅಧ್ಯಕ್ಷ ಸ್ಥಾನ ಬದಲಿಸುವ ಕುರಿತು ಕೆಲವರು ಪತ್ರ ಬರೆದಿದ್ದಾದ್ದು, ಕಾಂಗ್ರೆಸ್ ನ ಕೆಲವು ನಾಯಕರು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ. ಅಷ್ಟೆ ಅಲ್ಲದೆ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲೇ ಈ ಕುರಿತು ವಿವಾದ ಸೃಷ್ಟಿಸಲು ತಂತ್ರ ಹೆಣೆಯಲಾಗಿದೆ ಎಂದೂ ರಾಹುಲ್ ಕಿಡಿಕಾರಿದ್ದಾರೆ.
ಇನ್ನು ರಾಹುಲ್ ಗಾಂಧಿ ಆರೋಪಕ್ಕೆ ಕೆರಳಿದ ಕಪಿಲ್ ಸಿಬಲ್ ಟ್ವೀಟ್ ಮೂಲಕ ಉತ್ತರಿಸಿದ್ದು, ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದವರಿಗೆ ರಾಹುಲ್ ಅಪಮಾನ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದವರ ಪೈಕಿ ಕಪಿಲ್ ಸಿಬಲ್ ಕೂಡ ಒಬ್ಬರಾಗಿದ್ದು, ರಾಹುಲ್ ಗಾಂಧಿ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂಕೋರ್ಟ್ನಲ್ಲಿ ಪಕ್ಷದ ಪರವಾಗಿ ಹೋರಾಡಿದ್ದೇವೆ. ಮಣಿಪುರದಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳಬಾರದು ಎಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕಳೆದ 30 ವರ್ಷಗಳಲ್ಲಿ ಬಿಜೆಪಿಗೆ ಅನುಕೂಲವಾಗುವಂತ ಒಂದೇ ಒಂದು ಮಾತನ್ನೂ ನಾವು ಆಡಿಲ್ಲದಿದ್ದರೂ, ರಾಹುಲ್ ನಮ್ಮ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಎಂದು ಕಪಿಲ್ ಸಿಬಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.