ಬೆಂಗಳೂರು, ಆ. 24(DaijiworldNews/HR): ಕಾಂಗ್ರೆಸ್ ನ ನೂತನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದನ್ನು ನಿರೀಕ್ಷಿಸಲಾಗುತ್ತಿದ್ದು, ಇದಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ವರ್ಚ್ಯುಯಲ್ ಸಭೆ ಸದ್ಯ ಜಾರಿಯಲ್ಲಿದೆ. ಈ ನಡುವೆ ಸಭೆಯ ಗೌಪ್ಯ ಮಾಹಿತಿ ಸೋರಿಕೆ ಬಗ್ಗೆ ಮಾಜಿ ಸಂಸದೆ, ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ಘಟಕದ ಮಾಜಿ ಮುಖ್ಯಸ್ಥೆ ರಮ್ಯಾ ಕಿಡಿಕಾರಿದ್ದಾರೆ.
ನೋ ಪಾಲಿಟಿಕ್ಸ್, ನೋ ಸಿನಿಮಾ ಎಂದಿದ್ದ ರಮ್ಯ ಮತ್ತೆ ಇತ್ತೀಚೆಗೆ ಆನ್ ಲೈನಲ್ಲಿ ಕಾಣಿಸಿಕೊಂಡು, ಸಕ್ರಿಯರಾಗಿದ್ದಾರೆ. ರಾಜಕೀಯ ನನ್ನ ಪಾಲಿಗೆ ಮುಗಿದ ಅಧ್ಯಾಯ ಮುಗಿದಿದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದ ಅವರು, ಇದೀಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಗ್ಗೆ ಬರುತ್ತಿರುವ ಊಹಾಪೋಹ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಯವರಿಗೆ ಸಾಥ್ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯ, ಭಿನ್ನಮತೀಯ ನಾಯಕರುಗಳು ಕಾಂಗ್ರೆಸ್ ನಾಯಕತ್ವ ಬದಲಾವಣೆ, ರಾಹುಲ್ ಗಾಂಧಿ ವಿರುದ್ಧ ಪತ್ರ ಬರೆದಿದ್ದಷ್ಟೇ ಅಲ್ಲ ಇದೀಗ ಸಭೆಯ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಬರೆದಿದ್ದಾರೆ.
ಇನ್ನು ಹಿರಿಯ ಮುಖಂಡ, ರಣದೆಪ್ ಸುರ್ಜೇವಾಲ ಕೂಡಾ ಇದೇ ರೀತಿಯಾಗಿ ಟ್ವೀಟ್ ಮಾಡಿದ್ದು, ಮಾಧ್ಯಮಗಳಿಗೆ ತಪ್ಪು ಸಂದೇಶ ನೀಡಬೇಡಿ ಎಂದು ಹಿರಿಯ ಮುಖಂಡ ಕಪಿಲ್ ಸಿಬಾಲ್ ರನ್ನು ಕೋರಿದ್ದಾರೆ.