ಬೆಂಗಳೂರು, ಆ. 24 (DaijiworldNews/MB) : ಅನಾರೋಗ್ಯದ ಕಾರಣದಿಂದ ನಿಮಗೆ ಪಕ್ಷವನ್ನು ಮುನ್ನಡೆಸಲು ಸಾಧ್ಯವಾಗದಿದ್ದರೆ, ರಾಹುಲ್ ಗಾಂಧಿಯವರು ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಲಿ ಎಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ.
ಪತ್ರವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ಅವರು, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಅಥವಾ ರಾಹುಲ್ ಗಾಂಧಿಯವರಿಗೆ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಸೋನಿಯಾ ಗಾಂಧಿಯವರಿಗೆ ನನ್ನ ಪತ್ರ. ಗಾಂಧಿ ಕುಟುಂಬವು ಪಕ್ಷವನ್ನು ಯಶಸ್ಸಿನತ್ತ ಕೊಂಡೊಯ್ಯಬಲ್ಲದು ಎಂದು ನನಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.
''1977ರಲ್ಲಿ ಇಂದಿರಾ ಗಾಂಧಿ ಸೋಲನುಭವಿಸಿದಾಗ ಗಾಂಧಿ ಕುಟುಂಬವನ್ನು ಗುರಿಯಾಗಿಸಲಾಯಿತು. ಆದರೆ ಅದನ್ನು ಸವಲಾಗಿ ಸ್ವೀಕರಿಸಿದ ಇಂದಿರಾ ಗಾಂಧಿಯವರು ಮತ್ತೆ ಪಕ್ಷವನ್ನು ಸಂಘಟಿಸಿ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ಸಾದರು. ರಾಜೀವ್ ಗಾಂಧಿ ಹತ್ಯೆಯ ಬಳಿಕವೂ ಪಕ್ಷದಲ್ಲಿ ನಾಯಕತ್ವದ ಸಮಸ್ಯೆ ಎದುರಾಗಿತ್ತು. ಆ ಸಂದರ್ಭದಲ್ಲಿ ನೀವು ಪಕ್ಷದ ನಾಯಕತ್ವ ವಹಿಸಿದ್ದೀರಿ. 2004ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಅವಕಾಶ ಇದ್ದರೂ ಪ್ರಧಾನಿ ಹುದ್ದೆ ನಿರಾಕರಿಸಿದ್ದೀರಿ. 1977, 1998ರಲ್ಲಿ ಎದುರಾದ ಪರಿಸ್ಥಿತಿ ಈಗ ಉಂಟಾಗಿದೆ. ಈ ಸಂದರ್ಭದಲ್ಲಿ ಪಕ್ಷ ಮಾತ್ರವಲ್ಲ ನಮ್ಮ ದೇಶವೇ ಸಂಕಷ್ಟದಲ್ಲಿದೆ. ದೇಶವು ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ನಾವು ಒಗ್ಗಟ್ಟಾಗಿರುವುದು ಮುಖ್ಯ. ಗಾಂಧಿ ಕುಟುಂಬ ಪಕ್ಷದ ನಾಯಕತ್ವ ವಹಿಸಿಕೊಂಡಾಗ ಮಾತ್ರ ಒಗ್ಗಟ್ಟು ಸಾಧ್ಯ'' ಎಂದು ಹೇಳಿದ್ದಾರೆ.
ಹಾಗೆಯೇ ಪಕ್ಷದಲ್ಲಿ ನಾಯಕತ್ವದ ವಿಚಾರದಲ್ಲಿ ಬಿಕ್ಕಟ್ಟು ಉಂಟಾಗಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆಯೂ ಈ ರೀತಿ ನಡೆದಿದೆ. ಇಂಥಹ ಸಂಕಷ್ಟ ಎದುರಾದಾಗ ಗಾಂಧಿ ಕುಟುಂಬವೇ ನಮ್ಮ ಪಕ್ಷವನ್ನು ಮುನ್ನಡೆಸಿರುವುದು ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.