ಬೆಂಗಳೂರು, ಆ. 25 (DaijiworldNews/MB) : ರಾಜ್ಯ ಸರ್ಕಾರ ಕೊರೊನಾ ಸಂಬಂಧಿಸಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ್ದು ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಕ್ವಾರಂಟೈನ್ ಹಾಗೂ ತಪಾಸಣೆ ಇಲ್ಲ ಎಂದು ಹೇಳಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಹಿಂದೆ ಅಂತರ್ ರಾಜ್ಯ ಪ್ರಯಾಣಕ್ಕೆ ಸಂಬಂಧಿಸಿ ನೀಡಿರುವ ಮಾರ್ಗಸೂಚಿಗಳಾದ ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ 14 ದಿನಗಳ ಕ್ವಾರಂಟೈನ್, ಕೈಗಳ ಮೇಲೆ ಮುದ್ರೆ ಹಾಕುವುದು, ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡುವುದು, ರಾಜ್ಯದ ಗಡಿಗಳು ಹಾಗೂ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆ ಸೇರಿ ಎಲ್ಲಾ ಮಾರ್ಗಸೂಚಿಗಳನ್ನು ರದ್ದು ಪಡಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊರ ರಾಜ್ಯದಿಂದ ಬರುವವರಿಗೆ ರೋಗ ಲಕ್ಷಣ ಇಲ್ಲದಿದ್ದಲ್ಲಿ, ಕ್ವಾರಂಟೈನ್ಗೆ ಒಳಗಾಗದೆ ನೇರವಾಗಿ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.
ಹಾಗೆಯೇ ಹೊರ ರಾಜ್ಯದಿಂದ ಬರುವವರಿಗೆ ಕೊರೊನಾದ ಯಾವುದೇ ಲಕ್ಷಣಗಳು ಇದ್ದರೆ ಸ್ವಯಂ ಕ್ವಾರಂಟೈನ್ಗೆ ಒಳಗಾಗಿ, ಕೂಡಲೇ ವೈದ್ಯಕೀಯ ಸಮಾಲೋಚನೆ ಪಡೆಯಬೇಕು. ರಾಜ್ಯಕ್ಕೆ ಬರುವಾಗಲೇ ರೋಗ ಲಕ್ಷಣಗಳು ಇದ್ದಲ್ಲಿ ತಾವಾಗಿಯೇ ಪ್ರತ್ಯೇಕವಾಗಿ ವಾಸಿಸಬೇಕು ಮತ್ತು ವೈದ್ಯಕೀಯ ಸಮಾಲೋಚನೆ ಪಡೆಯಬೇಕು. ಆಪ್ತಮಿತ್ರ ಸಹಾಯವಾಣಿಗೆ (14410) ಕರೆ ಮಾಡಬಹುದು. ಇನ್ನು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆದುಕೊಳ್ಳುವುದು ಈ ಮೊದಲಿನಂತೆ ಕಡ್ಡಾಯವಾಗಿದೆ.
ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇತ್ತೀಚೆಗೆ ಅನ್ಲಾಕ್–3ಗಾಗಿ ಹೊರಡಿಸಲಾದ ಮಾರ್ಗಸೂಚಿಗಳ ಅನ್ವಯ ಅಂತರ್ ರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.