ಬಲ್ಲಿಯಾ, ಆ. 25 (DaijiworldNews/MB) : ಹಿಂದಿ ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಸೋಮವಾರ ರಾತ್ರಿ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ಪತ್ರಕರ್ತರನ್ನು ರತನ್ ಸಿಂಗ್ (45) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ರತನ್ ಅವರಿಗೆ ನೆರೆಹೊರೆಯವರೊಂದಿಗೆ ಆಸ್ತಿ ವಿವಾದವಿತ್ತು. ಸೋಮವಾರ ಈ ಸಂಬಂಧ ಜಗಳ ನಡೆದಿದ್ದು ಈ ಸಂದರ್ಭ ರತನ್ ಅವರಿಗೆ ನೆರೆಯವರು ಗುಂಡು ಹಾರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದಿನೇಶ್ ಸಿಂಗ್, ಅರವಿಂದ್ ಸಿಂಗ್, ಸುನೀಲ್ ಸಿಂಗ್ ಮತ್ತು ಮೋತಿ ಸಿಂಗ್ ಎಂಬ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಎರಡು ಕಡೆಯವರು ಆಸ್ತಿ ವಿವಾದಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್ಐಆರ್ ಒಂದನ್ನು 2019ರಲ್ಲಿ ದಾಖಲಿಸಿದ್ದರು. ಆಸ್ತಿ ವಿವಾದ ಈ ಕೊಲೆಗೆ ಕಾರಣವಾಗಿದ್ದು ವೃತ್ತಿ ಜೀವನಕ್ಕೂ ಈ ಕೊಲೆಗೆ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.