ಬೆಂಗಳೂರು, ಆ. 25 (DaijiworldNews/MB) : ''ಬಿ ಎಸ್ ಯಡಿಯೂರಪ್ಪನವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಬದಲಾವಣೆಯ ಪ್ರಶ್ನೆಯೇ ಇಲ್ಲ. ನಾನು ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಿಎಸ್ವೈ ಅವರೊಂದಿಗೆ ಜಂಟಿಯಾಗಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದೇನೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಆಗಸ್ಟ್ 24 ರ ಸೋಮವಾರದಂದು ಕನ್ನಡ ಪತ್ರಿಕೆಯೊಂದಕ್ಕೆ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಪಕ್ಷ ಮತ್ತು ಸರ್ಕಾರದ ನಡುವೆ ಯಾವುದೇ ಸಮನ್ವಯವಿಲ್ಲ ಹಾಗೂ ಪಕ್ಷಕ್ಕೆ ಸೇರ್ಪಡೆಯಾದ ಇತರೆ ಪಕ್ಷದಲ್ಲಿದ್ದ ನಾಯಕರು ಪಕ್ಷದ ಪ್ರಗತಿಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದು, ''ಪಕ್ಷದಲ್ಲಿ ವಲಸಿಗರು ಹಾಗೂ ಇತರ ಪಕ್ಷದ ಕಾರ್ಯಕರ್ತರ ನಡುವೆ ಯಾವುದೇ ತಾರತಮ್ಯ ಮಾಡಲಾಗುತ್ತಿಲ್ಲ. ಯಾವುದೇ ಕಾರ್ಯಕರ್ತರು ಮಲತಾಯಿ ಧೋರಣೆಗೆ ತುತ್ತಾಗಿಲ್ಲ'' ಎಂದು ಹೇಳಿದ್ದಾರೆ.
ಇನ್ನು ಕೊರೊನಾ ಕಿಟ್ಗಳ ಅಕ್ರಮಗಳಿಗೆ ಸಂಬಂಧಿಸಿ ಮಾತನಾಡಿದ ಅವರು, ''ಯಾವುದೇ ಅಕ್ರಮಗಳು ನಡೆದಿಲ್ಲ'' ಎಂದು ವಾದಿಸಿದ್ದು, ''ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಮೀರಿಸಿದ್ದರಿಂದ ತಾನು ಮುನ್ನಲೆಗೆ ಬರಲು ಸಿದ್ದರಾಮಯ್ಯನವರು ಈ ತಂತ್ರವನ್ನು ರಚಿಸಿದ್ದಾರೆ'' ಎಂದು ಆರೋಪ ಮಾಡಿದರು.
ಹಾಗೆಯೇ ''ಬಿ ಎಲ್ ಸಂತೋಷ್ ಅವರು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದು ಪಕ್ಷಕ್ಕೆ ಮಾರ್ಗದರ್ಶನ ನೀಡುತ್ತಾರೆಯೇ ಹೊರತು ಪಕ್ಷವನ್ನು ನಿಯಂತ್ರಿಸುತ್ತಿಲ್ಲ'' ಎಂದು ಕೂಡಾ ಈ ಸಂದರ್ಭದಲ್ಲೇ ನಳಿನ್ ಅವರು ಹೇಳಿದ್ದಾರೆ.
''ನನ್ನ ಮತ್ತು ಯಡಿಯೂರಪ್ಪ ಅವರ ಜಂಟಿ ನಾಯಕತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 150 ಸ್ಥಾನಗಳನ್ನು ಗೆಲ್ಲಲಿದೆ'' ಎಂದು ಭರವಸೆ ವ್ಯಕ್ತಪಡಿಸಿದ ಅವರು, ''ಕೊರೊನಾ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಕೋಟ್ಯಾಂತರ ಜನರಿಗೆ ಆಹಾರ ಮತ್ತು ಔಷಧಿಗಳನ್ನು ವಿವಿಧ ಸೇವಾ ಸಂಸ್ಥೆಗಳ ಮೂಲಕ ಪೂರೈಸಿದ್ದಾರೆ'' ಎಂದಿದ್ದಾರೆ.
''ಕೊರೊನಾ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿರುವುದು, ರೈತ ಆತ್ಮಹತ್ಯೆಗಳನ್ನು ನಿಲ್ಲಿಸಿರುವುದು, ಹಗರಣಗಳನ್ನು ತಪ್ಪಿಸಿರುವುದು ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿರುವುದು ರಾಜ್ಯ ಸರ್ಕಾರದ ಸಾಧನೆ'' ಎಂದು ಸರ್ಕಾರವನ್ನು ಶ್ಲಾಘಿಸಿದರು.