ಬೆಂಗಳೂರು, ಆ. 25 (DaijiworldNews/MB) : ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಮಾಜಿ ಅಧಿಕಾರಿ ಅಣ್ಣಾಮಲೈ ಅವರು ಇಂದು ದೆಹಲಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದು ಕರ್ನಾಟಕ ಬಿಜೆಪಿ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿರುವ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವಎಸ್ ಸುರೇಶ್ ಕುಮಾರ್ ಅವರು, ''ಪೋಲಿಸ್ ಇಲಾಖೆಯಲ್ಲಿದ್ದಾಗ ತಮ್ಮ ದಕ್ಷತೆಗೆ, ಕಾರ್ಯತತ್ಪರತೆಗೆ ಹೆಸರಾಗಿದ್ದ ಶ್ರೀ ಅಣ್ಣಾಮಲೈ ರವರು ಇಂದು ಬಿಜೆಪಿಗೆ ಸೇರುತ್ತಿರುವ ವಿಷಯ ಅತ್ಯಂತ ಸಂತಸ ತಂದಿದೆ'' ಎಂದು ಹೇಳಿದ್ದಾರೆ.
ಇನ್ನು ಅಣ್ಣಾಮಲೈ ಅವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು, ''ಕರ್ನಾಟಕ ಕೇಡರ್ನ ನಿವೃತ್ತಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಅವರಿಗೆ ಹೃದಯಪೂರ್ವಕ ಸ್ವಾಗತ'' ಎಂದಿದ್ದಾರೆ.
ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮತ್ತು ಜನಪ್ರಿಯವಾಗಿ 'ಸಿಂಗಂ' ಎಂದು ಕರೆಯಲ್ಪಡುವ ಅಣ್ಣಾಮಲೈ ಅವರು 2019 ರ ಮೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿಗೆ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ.