ಬೆಂಗಳೂರು, ಆ 25 (DaijiworldNews/PY): ಇಂದು ಸಿಎಂ ಬಿಎಸ್.ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ನಾಲ್ಕು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗಕ್ಕೆ ತೆರಳಿ ಸಮೀಕ್ಷೆ ನಡೆಸಲಿದ್ದು, ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇನೆ. ಪ್ರವಾದಿಂದಾಗಿರುವ ನಷ್ಟ ಸೇರಿದಂತೆ ಅನಾಹುತದ ಮಾಹಿತಿ ಪಡೆದುಕೊಳ್ಳಲಿದ್ದು, ಪರಿಹಾರದ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಅಧಿಕ ಅನಾಹುತಗಳು ಸಂಭವಿಸಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲಾಗುವುದು. ಬೆಳೆ ಹಾನಿ ಸೇರಿದಂತೆ ಆಸ್ತಿ ನಷ್ಟದ ವಿಚಾರವಾಗಿ ವರದಿ ಪಡೆದುಕೊಂಡು ಸರ್ಕಾರದಿಂದ ಅಗತ್ಯ ನೆರವನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕಂದಾಯ ಸಚಿವ ಆರ್ ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡಾ ಸಿಎಂ ಬಿಎಸ್ವೈ ಅವರೊಂದಿಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ.