ನವದೆಹಲಿ, ಆ. 25 (DaijiworldNews/MB) : ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಪ್ ಸರ್ಕಾರದ ವಿರುದ್ದ ಬಿಜೆಪಿ ಆಯೋಜಿಸಿರುವ ಬೃಹತ್ ಆಂದೋಲನದಲ್ಲಿ ಭಾಗಿಯಾಗುವಂತೆ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಸೋಮವಾರ ಪತ್ರದ ಮೂಲಕ ವಿನಂತಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿರುವ ಆದೇಶ್ ಗುಪ್ತಾ ಅವರು, ''ಆಪ್ ಸರ್ಕಾರವು ರಾಜಕೀಯದಲ್ಲಿರುವ ಪರಿಶುದ್ದತೆಯನ್ನು ಹಾಳು ಮಾಡಿದೆ. ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಆಪ್ ಹಿಂಸಾಚಾರವನ್ನು ನಡೆಸಿದೆ. ಆಪ್ನ ಕೋಮು ಗಲಭೆಯಿಂದಾಗಿ ದೆಹಲಿಯಲ್ಲಿ ಜರನು ನೊಂದಿದ್ದಾರೆ. ಈ ಹಿಂಸಾಚಾರದಿಂದ 53 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 200 ಮಂದಿ ಗಾಯಗೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಆಮ್ ಆದ್ಮಿ ಪಕ್ಷ. ಅವರ ವಿರುದ್ದ ನಾವು ನಿರಂತರವಾಗಿ ಹೋರಾಡುತ್ತಿದ್ದೇವೆ. ನೀವು ಕೂಡಾ ದೆಹಲಿಗೆ ಬಂದು ಆಪ್ ಸರ್ಕಾರದ ಭ್ರಷ್ಟಾಚಾರದ ವಿರುದ್ದದ ನಮ್ಮ ಆಂದೋಲನದ ಜೊತೆ ಕೈ ಜೋಡಿಸಿ'' ಎಂದು ಅಣ್ಣಾ ಹಜಾರೆ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ದೆಹಲಿಯ ರಾಮ್ಲೀಲಾ ಮೈದಾನದಿಂದ 2011 ರಲ್ಲಿ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಕೇಜ್ರಿವಾಲ್ ಅವರು ಮುಂಚೂಣಿ ನಾಯಕರಾಗಿದ್ದರು. ಬಳಿಕ ಕೇಜ್ರಿವಾಲ್ ಮತ್ತು ಅವರ ಬೆಂಬಲಿಗರು ಆಪ್ ಪಕ್ಷವನ್ನು ಸ್ಥಾಪಿಸಿ ದೆಹಲಿಯಲ್ಲಿ ಸತತ ಮೂರು ಬಾರಿ ಸರ್ಕಾರ ರಚಿಸಿದ್ದಾರೆ.