ಬೆಂಗಳೂರು, ಆ. 25 (DaijiworldNews/MB) : ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಯಾರೂ ಕೂಡಾ ಸೋನಿಯಾ ಗಾಂಧಿಯವರ ನಾಯಕತ್ವವನ್ನು ಪ್ರಶ್ನಿಸಿಲ್ಲ. ಸೋನಿಯಾ ಅವರು ಪಕ್ಷದ ತಾಯಿಯ ಸ್ಥಾನದಲ್ಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೇಳಿದ್ದಾರೆ.
ಸೋಮವಾರ ನಡೆಸ ಸಿ.ಡಬ್ಲ್ಯೂ.ಸಿ ಸಭೆಯ ಕುರಿತಾಗಿ ಮಾತನಾಡಿದ ಅವರು, ''ಈ ಸಭೆಯಲ್ಲಿ ಎಲ್ಲಾ ಸದಸ್ಯರಿಗೂ ಮಾತನಾಡುವ ಅವಕಾಶ ನೀಡಲಾಗಿದೆ. ಹಾಗೆಯೇ ಸುಧೀರ್ಘ ಚರ್ಚೆ ನಡೆಸಲಾಗಿದೆ. ನನ್ನ ಅನುಭವದಲ್ಲಿ ಇದೇ ಮೊದಲಾಗಿದೆ. ಆನಂದ್ ಶರ್ಮಾ, ಮುಕುಲ್ ವಾಸ್ನಿಕ್, ಕಪಿಲ್ ಸಿಬಲ್ ಎಲ್ಲರೂ ಪಕ್ಷನಿಷ್ಠರಾಗಿದ್ದಾರೆ. ಕಲ್ಕತ್ತಾ ಅಧೀವೇಶನದ ಬಳಿಕ ಕಾರ್ಯಕಾರಿ ಸಮಿತಿ ಆಯ್ಕೆ, ಎಐಸಿಸಿ ಅಧಿವೇಶನ ನಡೆದಿರಲಿಲ್ಲ. ಇವೆಲ್ಲವೂ ಸಂಪ್ರದಾಯದಂತೆ ನಡೆಯಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು ಅಷ್ಟೇ'' ಎಂದು ತಿಳಿಸಿದ್ದಾರೆ.
''ಸೋನಿಯಾ ಗಾಂಧಿಯವರು ನಿನ್ನೆ ನಡೆದ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸೋಣ. ಯಾವುದೇ ಪಕ್ಷದಲ್ಲಿ ಅಡೆತಡೆಗಳು ಬರುವುದು ಸಹಜವಾಗಿದೆ ಎಂದು ಹೇಳಿದ್ದಾರೆ'' ಎಂದು ತಿಳಿಸಿರುವ ಮುನಿಯಪ್ಪ ಅವರು, ''ಸೋನಿಯಾ ಗಾಂಧಿ ಅವರು ಪ್ರಧಾನಿ ಸ್ಥಾನ ತ್ಯಜಿಸಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಪಕ್ಷ ಕಟ್ಟಲು ಸೋನಿಯಾ ಅವರು ಬಹಳ ಶ್ರಮಿಸಿದ್ದಾರೆ'' ಎಂದು ಹೇಳಿದರು.
ಇನ್ನು ರಾಹುಲ್ ಗಾಂಧಿ ಅವರ ಕುರಿತಾಗಿ ಮಾತನಾಡಿರುವ ಅವರು, ''ಮೋದಿಯವರನ್ನು ಎದುರಿಸಬಲ್ಲ ಏಕೈಕ ವ್ಯಕ್ತಿ ರಾಹುಲ್ ಗಾಂಧಿಯವರು, ಅವರು ಮತ್ತೆ ಎಐಸಿಸಿ ಅಧ್ಯಕ್ಷರಾಗುವ ವಾತಾವರಣ ಇದೆ. ಫೆಬ್ರವರಿ 12 ರಂದು ರಾಹುಲ್ ಅವರು ಚೀನಾದಲ್ಲಿ ಕೊರೊನಾ ಹರಡುತ್ತಿದ್ದು ಭಾರತಕ್ಕೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದರು. ಆದರೆ ಕೇಂದ್ರ ಆರೋಗ್ಯ ಸಚಿವರು ಅದನ್ನು ಗಂಭೀರವಾಗಿ ಪರಿಗಣಿಸದೆ ರಾಹುಲ್ ಗಾಂಧಿಯವರನ್ನೇ ಟೀಕೆ ಮಾಡಿದ್ದರು ಎಂದು ಹೇಳಿದ್ದು, ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವ ಸಂದರ್ಭದಲ್ಲಿ ಯಾಕಾಗಿ ಈ ಪತ್ರ ಬರೆದದ್ದು ಎಂದು ರಾಹುಲ್ ಅವರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ'' ಎಂದು ತಿಳಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ''ಮೋದಿ ಬಂದ ಬಳಿಕ ದೇಶ ಉದ್ದಾರವಾದಂತೆ ಮಾಧ್ಯಮಗಳು ಬಿಂಬಿಸುತ್ತಿದೆ. ಆದರೆ ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಸ್ಥಿತಿ ಇಷ್ಟೊಂದು ಹದಗೆಟ್ಟಿದೆ. ಜಿ.ಡಿ.ಪಿ. ನೆಲಕಚ್ಚಿದೆ. ಕೇಂದ್ರ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿಲ್ಲ. ವಾಜಪೇಯಿ ಆಡಳಿತದಲ್ಲಿಯೂ ಈ ಸ್ಥಿತಿ ಉಂಟಾಗಿರಲಿಲ್ಲ. ಹೀಗೆಯೇ ಮುಂದುವರಿದರೆ ದೇಶದ ಗತಿ ಏನು'' ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.