ನವದೆಹಲಿ, ಆ 25 (DaijiworldNews/PY): ರಾವಲ್ಪಿಂಡಿ ನಗರದಲ್ಲಿ ಜೆಇಎಂ ಹಾಗೂ ಐಎಸ್ಐ ಗುಪ್ತ ಸಭೆ ನಡೆಸಿರುವುದಾಗಿ ಗುಪ್ತಚರ ಸಂಸ್ಥೆಗಳು ವರದಿ ಮಾಡಿದೆ.
ಭಾರತೀಯ ಸೇನೆ ಹಾಗೂ ಸೈನಿಕರ ಮೇಲೆ ವಿಧ್ವಂಸಕ ದಾಳಿ ನಡೆಸುವ ವಿಚಾರವಾಗಿ ಜೈಷ್ ಸಂಘಟನೆಯ ನಾಯಕ ಎಮಿರ್ ಮೌಲಾನಾ ಅಬ್ದುಲ್ ರಾಫ್ ಆಶ್ಗರ್ ಹಾಗೂ ಐಎಸ್ಐನ ಇಬ್ಬರು ಅತ್ಯುನ್ನತ ಅಧಿಕಾರಿಗಳು ಗುಪ್ತ ಸಭೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗುಪ್ತಚರ ದಳಗಳು ಮಾಹಿತಿ ನೀಡಿವೆ.
ನಿಷೇಧಿತ ಉಗ್ರಗಾಮಿ ಸಂಘಟನೆ ಜೈಷ್-ಎ-ಮಹಮದ್ ಹಾಗೂ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ನಡೆಸಿದ ಈ ಸಭೆಯಲ್ಲಿ ಅಶ್ಗರ್ ಸಹೋದರ ಮೌಲಾನಾ ಅಮ್ಮರ್ ಕೂಡಾ ಪಾಲ್ಗೊಂಡಿದ್ದು, ದಾಳಿ ನಡೆಸುವ ವಿಚಾರವಾಗಿ ಸಲಹೆಗಳನ್ನಿತ್ತಿದ್ದಾನೆ ಎಂದು ಮೂಲಗಳು ಹೇಳಿವೆ.
ಭಾರತೀಯ ವಾಯುಪಡೆಯು ಬಾಲಾಕೋಟ್ ಮೇಲೆ ನಡೆಸಿದ ದಾಳಿಯಲ್ಲಿ ಉಗ್ರಗಾಮಿಗಳನ್ನು ಹತ್ಯೆ ಮಾಡಿದ ಬಳಿಕ ಜೈಷ್ ಸಂಘಟನೆ ಕೆಂಡಕಾರಿದೆ. ಇತ್ತೀಚೆಗೆ ಇಸ್ಲಾಮಾಬಾದ್ನಲ್ಲಿ ಭಯೋತ್ಪಾದಕ ಮುಖಂಡರ ಸಭೆ ನಡೆದಿದ್ದು, ಭಾರತ ಸೇರಿದಂತೆ ಭಾರತೀಯ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುವ ಬಗ್ಗೆ ಮಾತುಕತೆ ನಡೆಸಿತ್ತು.
ಭಯೋತ್ಪಾದಕರು ಇಸ್ಲಾಮಾಬಾದ್ ಸೇರಿದಂತೆ ರಾವಲ್ಪಿಂಡಿ, ಕರಾಚಿ ಹಾಗೂ ಕೆಲವು ಕಡೆಗಳಲ್ಲಿ ಈ ರೀತಿಯಾದ ಗುಪ್ತ ಸಭೆಗಳನ್ನು ನಡೆಸುತ್ತಿದ್ದು, ಈ ವಿಚಾರ ಆತಂಕಗೊಳ್ಳುವ ವಿಷಯವಾಗಿದೆ ಎಂದು ಗುಪ್ತಚರ ದಳದ ಉನ್ನತಾಕಾರಿಯೊಬ್ಬರು ಹೇಳಿದ್ದಾರೆ.