ನವದೆಹಲಿ, ಆ. 25 (DaijiworldNews/MB) : 'ಸಿಂಗಂ' ಎಂದು ಕರೆಯಲ್ಪಡುವ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಮಾಜಿ ಅಧಿಕಾರಿ ಅಣ್ಣಾಮಲೈ ಅವರು ಮಂಗಳವಾರ ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರುಳಿಧರ್ ರಾವ್ ಸಮ್ಮುಖದಲ್ಲಿ ಅಣ್ಣಾಮಲೈ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದು ಅಣ್ಣಾಮಲೈ ಅವರನ್ನು ಮುರುಳಿಧರ್ ರಾವ್ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಪ್ರಾಮಾಣಿಕತೆ ಮತ್ತು ನಿಷ್ಠುರ ಕಾರ್ಯವೈಖರಿಯಿಂದ ಹೆಸರು ಪಡೆದಿರುವ ಅಣ್ಣಾಮಲೈ ಅವರನ್ನು ಪಕ್ಷಕ್ಕೆ ಸ್ವಾಗತಿಸಲು ಬಹಳ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡು ಮಾತನಾಡಿದ ಅಣ್ಣಾಮಲೈ ಅವರು, ''ಬಿಜೆಪಿಯ ರಾಷ್ಟ್ರವಾದ ಹಾಗೂ ಅಭಿವೃದ್ಧಿ ಸಿದ್ಧಾಂತಗಳನ್ನು ಮೆಚ್ಚಿ, ಪ್ರೇರೇಪಿತನಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಪ್ರಧಾನಿ ನರೇಂಧ್ರ ಮೋದಿಯವರ ಅಭಿವೃದ್ಧಿ ಪರವಾದ ರಾಜಕಾರಣ ಹಾಗೂ ದೇಶವನ್ನು ಮುನ್ನಡೆಸುವ ರೀತಿ ಮೆಚ್ಚುವಂತದ್ದು 21ನೇ ಶತಮಾನದ ಪ್ರಶ್ನಾತೀತ ನಾಯಕ ನರೇಂದ್ರ ಮೋದಿಯವರು. ಹಾಗೆಯೇ ತಮಿಳುನಾಡಿಗೆ ಬಿಜೆಪಿ ಪಕ್ಷದ ಅನಿವಾರ್ಯವಿದೆ, ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಪ್ರಾಮಾಣಿಕ ಪ್ರಯತ್ನ ನಾನು ಮಾಡುತ್ತೇನೆ'' ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.