ಹಾವೇರಿ, ಆ 25 (DaijiworldNews/PY): ಕೈ ಅಧ್ಯಕ್ಷಗಾದಿ ಅವರನ್ನ ಬಿಟ್ಟರೆ ಇವರು, ಇವರನ್ನ ಬಿಟ್ಟರೆ ಅವರು ಅನ್ನೋ ಹಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಗ್ರಾಮದ ಬಳಿ ಮಾತನಾಡಿದ ಅವರು, ಹಾಳೂರಿಗೆ ಉಳಿದವನೆ ಗೌಡ ಎಂಬ ಮಾತಿನಂತೆ ಕಾಂಗ್ರೆಸ್ಸಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಯಾರಿಗೂ ದೊರಕುತ್ತಿಲ್ಲ. ಇನ್ನು ಗಾಂಧಿ ಕುಟುಂಬವನ್ನು ಹೊರತುಪಡಿಸಿ ಹೊಸ ವ್ಯಕ್ತಿಗಳಿಗೆ ಅವಕಾಶ ನೀಡಿದರೆ ಪಕ್ಷ ಉಳಿಯುತ್ತದೆ ಎಂದು ಹಿರಿಯ ನಾಯಕರು ತಿಳಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ. ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಲ್ಲಲು ಸಾಧ್ಯವಿಲ್ಲ. ಇನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಬೇಕಾದರು ಆಯ್ಕೆ ಮಾಡಲಿ ಅದು ಅವರಿಗೆ ಬಿಟ್ಟದ್ದು. ನಾವು ಮಾತ್ರ ಯೋಚನೆ ಮಾಡೋದು ನಮ್ಮ ಪಕ್ಷದ ಬಗ್ಗೆ ಮಾತ್ರ ಎಂದು ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇದೊಂದು ಸಂತಸದ ಸಂಗತಿ. ಪಕ್ಷಕ್ಕೆ ಉತ್ತಮವಾದ ವ್ಯಕ್ತಿ ಬಂದಿರುವುದಕ್ಕೆ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.