ಉತ್ತರ ಪ್ರದೇಶ, ಆ. 25 (DaijiworldNews/MB) : ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೆ 2024ರಲ್ಲಿ ಬಿಜೆಪಿಗೆ ದೊಡ್ಡ ಸವಾಲು ಎದುರಾಗುತ್ತದೆ ಎಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಗ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅನಿಲ್ ಶಾಸ್ತ್ರಿ ಅವರು ಹೇಳಿದ್ದಾರೆ.
ಪಕ್ಷದಲ್ಲಿ ಉಂಟಾಗಿದ್ದ ನಾಯಕತ್ವದ ಬಿಕ್ಕಟ್ಟಿಗೆ ಸಂಬಂಧಿಸಿ ಮಾತನಾಡಿದ ಅವರು, ''ನೆಹರು ಅಥವಾ ಗಾಂಧಿ ಕುಟುಂಬದವರು ಕಾಂಗ್ರೆಸ್ನ ಮುಖ್ಯಸ್ಥರಾಗಬೇಕು. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ಸವಾಲು ಎದುರಾಗಲಿದೆ. ಸೋನಿಯಾ ಗಾಂಧಿ ಅವರು ಮುಂದೆ ಅಧ್ಯಕ್ಷ ಸ್ಥಾನ ವಹಿಸಲು ಸಾಧ್ಯವಾಗದಿದ್ದರೆ ಬಳಿಕ, ರಾಹುಲ್ ಅಥವಾ ಪ್ರಿಯಾಂಕಾ ಅಧ್ಯಕ್ಷರಾಗಬೇಕು. ಕಳೆದ ವರ್ಷವಷ್ಟೇ ರಾಹುಲ್ ಗಾಂಧಿಯವರು ಅಧಿಕಾರ ತ್ಯಜಿಸಿದ್ದು ಹಾಗಿರುವಾಗ ಪ್ರಿಯಾಂಕಾ ಗಾಂಧಿಯವರೇ ಅರ್ಹರು ಎಂದು ನನ್ನ ಅಭಿಪ್ರಾಯ'' ಎಂದು ಹೇಳಿದ್ದಾರೆ.
ಇನ್ನು ''ಕಾಂಗ್ರೆಸ್ನಲ್ಲಿ ನಾಯಕತ್ವದಲ್ಲಿ ಹಲವು ಕೊರತೆಗಳು ಇದೆ. ಪಕ್ಷದಲ್ಲಿ ಸಭೆಗಳು ನಡೆಯುವುದಿಲ್ಲ ಎಂಬುದು ಬಹಳ ಮುಖ್ಯವಾದ ವಿಷಯ. ಬೇರೆ ರಾಜ್ಯದ ಪಕ್ಷದ ಮುಖಂಡರು ದೆಹಲಿಗೆ ಬಂದರೆ ಹಿರಿಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ರಾಹುಲ್, ಸೋನಿಯಾರಂತಹ ನಾಯಕರು ಸಭೆಯನ್ನು ನಡೆಸಲು ಆರಂಭ ಮಾಡಿದರೆ ಶೇ. 50ರಷ್ಟು ಸಮಸ್ಯೆಗಳು ಬಗೆಹರಿಯಲಿದೆ'' ಎಂದು ಹೇಳಿದ್ದಾರೆ.