ಮುಂಬೈ, ಆ 25 (DaijiworldNews/PY): ಕಳೆದ ಹಣಕಾಸು ವರ್ಷ ಅಂದರೆ, 2019-20ರಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿಲ್ಲ ಹಾಗೂ ಈ ನೋಟುಗಳ ಚಲಾವಣೆ ಪ್ರಸ್ತುತ ವರ್ಷದಲ್ಲಿ ಕಡಿಮೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
2018ರ ಮಾರ್ಚ್ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ 2 ಸಾವಿರ ರೂ. ಮುಖಬೆಲೆಯ ನೋಟುಗಳ ಸಂಖ್ಯೆ 33,632 ಲಕ್ಷವಿದ್ದು, 2019ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷವಾಗಿತ್ತು. ಅಲ್ಲದೇ, 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷಕ್ಕೆ ಇಳಿದಿದೆ ಎಂದು ಆರ್ಬಿಐ ವಾರ್ಷಿಕ ವರದಿ ತಿಳಿಸಿದೆ.
ಒಟ್ಟು ನೋಟುಗಳ ಪ್ರಮಾಣವು 2020ರ ಮಾರ್ಚ್ ಅಂತ್ಯದ ವೇಳೆಗೆ ಶೇ. 2.4 ರಷ್ಟಿದ್ದ 2,000 ರೂ ಮುಖಬೆಲೆಯ ನೋಟುಗಳ ಸಂಖ್ಯೆ ಕಳೆದ ವರ್ಷ 2019ರ ಮಾರ್ಚ್ ಅಂತ್ಯದ ಸಂದರ್ಭ ಶೇ.3 ಹಾಗೂ 2018ರ ಮಾರ್ಚ್ ಅಂತ್ಯದ ವೇಳೆಗೆ 3.3 ರಷ್ಟಿತ್ತು ಎಂದು ಮಾಹಿತಿ ನೀಡಿದೆ.
ಮೌಲ್ಯದ ದೃಷ್ಟಿಯಿಂದ ಈ ಷೇರು 2020ರ ಮಾರ್ಚ್ ಅಂತ್ಯದ ವೇಳೆಗೆ ಶೇ.22.6 ಕ್ಕೆ ಇಳಿದಿದ್ದು, ಇದು 2019ರ ಮಾರ್ಚ್ ಅಂತ್ಯದ ವೇಳೆಗೆ 31.2 ರಿಂದ ಹಾಗೂ ಮಾರ್ಚ್ 2018ರ ಕೊನೆಯಲ್ಲಿ 37.3 ಶೇಕಡಕ್ಕೆ ಇಳಿದಿದೆ ಎಂದು ವರದಿಯಲ್ಲಿ ವಿವರಿಸಿದೆ.
ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸಲು 2019-20ರ ವೇಳೆ ಯಾವುದೇ ರೀತಿಯಾದ ಬೇಡಿಕೆ ಬಂದಿಲ್ಲ. ಅಲ್ಲದೇ, ಬಿಆರ್ಬಿಎನ್ಎಂಪಿಎಲ್ ಹಾಗೂ ಎಸ್ಪಿಎಂಸಿಐಎಲ್ನಿಂದ ಕೂಡಾ ನೂತನವಾಗಿ ಸರಬರಾಜು ಆಗಿಲ್ಲ. ಈ ನಡುವೆ 500 ರೂ ಹಾಗೂ 200 ರೂ ಮುಖಬೆಲೆಯ ನೋಟುಗಳ ಚಲಾವಣೆಯಲ್ಲಿ ಏರಿಕೆ ಕಂಡಿದೆ.
2019-20ರ ವೇಳೆ ಬಿಆರ್ಬಿಎನ್ಎಂಪಿಎಲ್ ಹಾಗೂ ಎಸ್ಪಿಎಂಸಿಐಎಲ್ಗೆ 100ರೂ, 50ರೂ, 200ರೂ, 10ರೂ ಹಾಗೂ 20 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಆದೇಶಿಸಲಾಗಿತ್ತು.
ಆರ್ಬಿಐಯೊಂದಿಗೆ ಬ್ಯಾಂಕ್ ನೋಟುಗಳ ಮುದ್ರಣಕ್ಕೆ ಸಂಬಂಧಪಟ್ಟ ಬಗ್ಗೆ ಸಮಾಲೋಚಿಸಿ ಸಾರ್ವಜನಿಕರ ವಹಿವಾಟಿನ ಬೇಡಿಕೆಗೆ ಅನುಕೂಲವಾಗುವಂತೆ ಕಾಪಾಡಿಕೊಳ್ಳಲು ಸರ್ಕಾರ ನಿರ್ಧರಿಸಿದ್ದು, 2019-20ನೇ ಸಾಲಿನಲ್ಲಿ 2,000 ರೂ ಮುಖಬೆಲೆಯ ನೋಟುಗಳ ಮುದ್ರಣಕ್ಕಾಗಿ ಯಾವುದೇ ಇಂಡೆಂಟ್ ಅನ್ನು ಮುದ್ರಣಾಲಯದಲ್ಲಿ ಇರಿಸಲಾಗಿಲ್ಲ. ಆದಾಗಿಯೂ, 2,000ರೂ ಬ್ಯಾಂಕ್ ನೋಟುಗಳ ಮುದ್ರಣವನ್ನು ನಿಲ್ಲಿಸುವ ಯಾವುದೇ ನಿರ್ಧಾರವಿಲ್ಲ ಎಂದು ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ 2020ರ ಮಾರ್ಚ್ 16ರಂದು ಲೋಕಸಭೆಗೆ ತಿಳಿಸಿದ್ದರು.