ನವದೆಹಲಿ, ಆ. 25 (DaijiworldNews/MB) : ಕಳೆದ ವರ್ಷ ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದ್ದ ಉಗ್ರ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಸುಮಾರು 13,500 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು, ಪಾಕ್ ಮೂಲದ ಜೈಶ್-ಎ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹಾಗೂ ಆತನ ಸಹೋದರ ರೌಫ್ ಅಸ್ಗರ್ ದಾಳಿಯ ಮಾಸ್ಟರ್ ಮೈಂಡ್ ಎಂದು ತಿಳಿಸಿದೆ.
ಜಮ್ಮು ನ್ಯಾಯಾಲಯಕ್ಕೆ ಮಂಗಳವಾರ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದ್ದು, ಈ ಇಬ್ಬರು ಸಹೋದರರು ಸಿಆರ್ಪಿಎಫ್ ವಾಹನದ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸುವ ತಂತ್ರವನ್ನು ಮಾಡಿದ್ದರು. ಇದೊಂದು ವ್ಯವಸ್ಥಿತ ಭಯೋತ್ಪಾದಕ ದಾಳಿ ಎಂದು ಉಲ್ಲೇಖ ಮಾಡಲಾಗಿದೆ. ಹಾಗೆಯೇ ಪುಲ್ವಾಮಾ ದಾಳಿಯನ್ನು ಹೊಗಳಿದ ಮೌಲಾನಾ ಮಸೂದ್ ಅಜರ್ನ ವಿಡಿಯೋಗಳನ್ನೂ ಕೂಡಾ ನ್ಯಾಯಾಲಯಕ್ಕೆ ಹಸ್ತಾಂತರ ಮಾಡಲಾಗಿದೆ. ದೂರವಾಣಿ ಸಂಭಾಷಣೆ, ವಾಟ್ಸಪ್ ಮೆಸೆಜ್, ಹಾಗೂ ಸ್ಫೋಟಕಗಳ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಇನ್ನು ಎನ್ಐಎ ಚಾರ್ಜ್ಶೀಟ್ನಲ್ಲಿ 20 ಆರೋಪಿಗಳನ್ನು ಹೆಸರಿಸಿದ್ದು ಈ ಪೈಕಿ ಹೆಚ್ಚಿನವರು ಸ್ಥಳೀಯರು ಎಂದು ತಿಳಿದು ಬಂದಿದೆ. ಚಾರ್ಜ್ ಶೀಟ್ ಪ್ರಕಾರ, ಸಿಆರ್ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿ 35 ಕಿಲೋ ಆರ್ಡಿಎಕ್ಸ್ ಸೇರಿ ಒಟ್ಟು 200 ಕಿಲೋನಷ್ಟು ಸ್ಫೋಟಕಗಳಿದ್ದವು. ಆರ್ಡಿಎಕ್ಸ್ ಅನ್ನು ಪಾಕಿಸ್ತಾನದಿಂದ ತರಲಾಗಿತ್ತು. ಇನ್ನುಳಿದ ಸ್ಫೋಟಕಗಳನ್ನು ಸ್ಥಳೀಯವಾಗಿಯೇ ಅಸೆಂಬಲ್ ಮಾಡಲಾಗಿತ್ತು ಎನ್ನಲಾಗಿದೆ.
ಅಲಿ ಅಹ್ಮದ್ ದಾರ್ ಎಂಬ ಆತ್ಮಾಹುತಿ ದಾಳಿಕೋರ, 2019, ಫೆಬ್ರವರಿ 14ರಂದು ಪುಲ್ವಾಮಾ ಬಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್ಪಿಎಫ್ ವಾಹನದ ಮೇಲೆ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆದಿದ್ದು ಇದರಿಂದಾಗಿ 40 ಯೋಧರು ಹುತಾತ್ಮರಾಗಿದ್ದರು.