ನವದೆಹಲಿ, ಆ 25 (DaijiworldNews/PY): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಪತ್ನಿ ಆಮಿ ಮೋದಿ ಅವರ ವಿರುದ್ದ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.
ಆಮಿ ಮೋದಿ ವಿರುದ್ದ ಭಾರತದಲ್ಲಿ ದಾಖಲಾದ ಮನಿ ಲಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
2019ರ ವೇಳೆ ಆಮಿ ಮೋದಿ ಅವರು ಅಮೆರಿಕದಲ್ಲಿ ಕಾಣಿಸಿಕೊಂಡಿದ್ದು, ಪ್ರಸ್ತುತ ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನೀರವ್ ಮೋದಿ ಅವರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಇದೀಗ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡುವ ವಿಚಾರದ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ.
ಕಳೆದ ಫೆಬ್ರವರಿಯಲ್ಲಿ ಆಮಿ ಮೋದಿ ಅವರು ನ್ಯೂಯಾರ್ಕ್ ನಗರದಲ್ಲಿ 2 ಅಪಾರ್ಟ್ಮೆಂಟ್ಗಳನ್ನು ಸುಮಾರು 30 ಮಿಲಿಯನ್ ಡಾಲರ್ಗೆ ಖರೀದಿ ಮಾಡಿದ್ದಾರೆ ಎಂಬುದಾಗಿ ಜಾರಿ ನಿರ್ದೇಶನಾಲಯವು ಆಮಿ ಮೋದಿ ಅವರ ವಿರುದ್ದ ಸಲ್ಲಿಸಿರುವ ಪೂರಕ ಚಾರ್ಜ್ ಶೀಟ್ನಲ್ಲಿ ಹೇಳಿದೆ.
ಇಬ್ಬರೂ ಕೂಡಾ ಹಲವು ಕಂಪೆನಿಗಳ ನಿರ್ದೇಶಕರಾಗಿದ್ದು, ಪಿಎನ್ಬಿ ಬ್ಯಾಂಕ್ ಪ್ರಕರಣದಲ್ಲಿಯೂ ಅವರ ಪಾತ್ರ ಇದೆ ಎಂದು ತಿಳಿಸಿದೆ.
ಭಾರತದ ವಿವಿಧ ಬ್ಯಾಂಕುಗಳಿಗೆ ನೀರವ್ ಮೋದಿ 6,498.20 ಕೋಟಿ ರೂ. ಹಾಗೂ ಮೇಹುಲ್ ಚೋಕ್ಸಿ 7,080.86 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಕಳೆದ ತಿಂಗಳು ಸಿಬಿಐ ಅಧಿಕಾರಿಗಳಿ ಇವರಿಬ್ಬರ ವಿರುದ್ದ ಸಲ್ಲಿಸಿದ್ದ ಚಾರ್ಜ್ ಶೀಟ್ನಲ್ಲಿ ತಿಳಿಸಲಾಗಿದೆ.