ತಿರುವನಂತಪುರ, ಆ. 26 (DaijiworldNews/MB) : ಮಂಗಳವಾರ ಸಂಜೆ ಕೇರಳ ರಾಜ್ಯ ಸಚಿವಾಲಯದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ಚಿನ್ನ ಕಳ್ಳಸಾಗಣೆ ಪ್ರಕರಣದ ಸಾಕ್ಷ್ಯ ನಾಶ ಮಾಡುವ ಷಡ್ಯಂತ್ರ ಇದಾಗಿದೆ ಎಂದು ವಿಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಆರೋಪ ಮಾಡಿದೆ.
ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಮಾಧ್ಯಮದವರು, ರಾಜಕಾರಣಿಗಳನ್ನು ಕೇರಳ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರು ಹೊರಕ್ಕೆ ಹೋಗುವಂತೆ ಮನವಿ ಮಾಡಿದ್ದು ಈ ಸಂದರ್ಭದಲ್ಲಿ ಅಲ್ಲಿಯೇ ಪ್ರತಿಭಟನೆ ಆರಂಭಿಸಿದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ವಿ. ಮುರಳೀಧರನ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಇನ್ನು ತೀವ್ರ ಪ್ರತಿಭಟನೆ ನಡೆಸಿದ ಪ್ರತಿಪಕ್ಷ ಕಾಂಗ್ರೆಸ್ನ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಅಗ್ನಿ ಅವಘಡ ನಡೆದ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದು ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬೆಂಕಿಯಿಂದ ಹಾನಿ ಉಂಟಾದ ಕಡತಗಳಲ್ಲಿ ವಿದೇಶ ಪ್ರವಾಸ ಮತ್ತು ಗಣ್ಯ ವ್ಯಕ್ತಿಗಳಿಗೆ ಸಂಬಂಧಿಸಿದ ಕಡತಗಳೂ ಇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಿರುವಾಗ ಇದು ಅಕ್ರಮ ಚಿನ್ನ ಸಾಗಾಟದ ಸಂಬಂಧಿಸಿದ ಮಾಹಿತಿಯನ್ನು ನಾಶ ಮಾಡುವ ವ್ಯವಸ್ಥಿತ ಸಂಚು ಎಂದು ಆರೋಪ ಮಾಡಿದ್ದು ವಿಪಕ್ಷ ನಾಯಕರು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವಂತೆಯೂ ಕರೆ ನೀಡಿದ್ದಾರೆ.
ರಾಜ್ಯಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕವಾಗಿ ತರಲಾದ ಸರಕುಗಳ ಮಾಹಿತಿಯನ್ನು ನೀಡುವಂತೆ ಎನ್ಐಎ ಹಾಗೂ ಇ.ಡಿ. ಪ್ರಧಾನ ಆಡಳಿತ ಕಚೇರಿ ಅಧಿಕಾರಿ ಬಳಿ ಕೇಳಿತ್ತು. ಹಾಗೆಯೇ ಸಿಸಿ ಟಿವಿ ದೃಶ್ಯಾವಳಿಗಳನ್ನೂ ನೀಡುವಂತೆ ತಿಳಿಸಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ಇನ್ನೂ ಕೂಡಾ ಅಧಿಕಾರಿಗಳು ಎನ್ಐಎಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಿಲ್ಲ ಎಂದು ಹೇಳಲಾಗಿದೆ. ಇದೀಗ ಈ ವಿಷಯವನ್ನೇ ಮುಂದಿಟ್ಟುಕೊಂಡು ಕೇರಳ ಸರ್ಕಾರದ ವಿರುದ್ದ ಆರೋಪ ಮಾಡುತ್ತಿರುವ ವಿಪಕ್ಷಗಳು ಈ ಅಗ್ನಿ ಅವಘಡದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಇದು ವ್ಯವಸ್ಥಿತ ಸಂಚು ಎಂದು ಆರೋಪಿಸಿದೆ.