ಬೆಳಗಾವಿ, ಆ. 26 (DaijiworldNews/MB) : ಸಾಲ ಮಾಡಿಯಾದರೂ ಪ್ರವಾಹದಿಂದ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹೇಳಿದ್ದಾರೆ.
ಮಂಗಳವಾರ ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸೆ. 12ರ ಬಳಿಕ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಪ್ರವಾಹ ಸಂತ್ರಸ್ಥರಿಗೆ ನೆರವಿಗೆ ಮನವಿ ಮಾಡುತ್ತೇನೆ. ಸಾಲ ಮಾಡಿಯಾದರೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ತೊಂದರೆಗೆ ಒಳಗಾಗದವರಿಗೆ ಪರಿಹಾರ ನೀಡುತ್ತೇನೆ'' ಎಂದು ಭರವಸೆ ನೀಡಿದ್ದಾರೆ.
''ಜಿಎಸ್ಟಿಯಲ್ಲಿ ರಾಜ್ಯದ ಪಾಲು 13 ಸಾವಿರ ಕೋಟಿ ಕುರಿತಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಬಗ್ಗೆ ಆಗಸ್ಟ್ 27ರಂದು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಕೊರೊನಾ ಕಾರಣದಿಂದಾಗಿ ರಾಜ್ಯ, ಕೇಂದ್ರ ಆರ್ಥಿಕ ಸ್ಥಿತಿಗೆ ತೊಂದರೆ ಉಂಟಾಗಿದೆ. ಸದ್ಯ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯುವ ಯತ್ನ ಮಾಡುತ್ತಿದ್ದೇನೆ. ಇನ್ನು 2–3 ತಿಂಗಳಿನಲ್ಲಿ ದೇಶದಲ್ಲಿ, ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಬಹುದು'' ಎಂದು ಹೇಳಿದ ಅವರು ಇದೇ ಸಂದರ್ಭದಲ್ಲಿ, ''ಕೊರೊನಾ ಪರಿಕರಗಳ ಖರೀದಿಗೆ ಸಂಬಂಧಿಸಿ ವಿಪಕ್ಷ ಶ್ವೇತ ಪತ್ರ ಹೊರಡಿಸಲು ಹೇಳಿದ್ದು ವಿಪಕ್ಷದ ಆಗ್ರಹದಂತೆ ಶ್ವೆತಪತ್ರ ಹೊರಡಿಸುವ ಅಗತ್ಯವಿಲ್ಲ. ಅಧಿವೇಶನದಲ್ಲ ವಿಪಕ್ಷದ ಎಲ್ಲಾ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇವೆ'' ಎಂದು ತಿಳಿಸಿದ್ದಾರೆ.
ಬಿಎಸ್ವೈ ಅವರು ಇದಕ್ಕೂ ಮೊದಲು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.