ಹಾಸನ ಆ 26 (Daijiworld News/MSP): ನಿರ್ಗತಿಕಳಂತೆ ತೋರುವ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ನಡೆಸಿದ ಘೋರ ಕೃತ್ಯ ಹಾಸನ ಮಾತ್ರವಲ್ಲ, ಕರ್ನಾಟಕವನ್ನೇ ತಲೆತಗ್ಗಿಸುವಂತೆ ಮಾಡಿದೆ.
ಮಂಗಳವಾರ ಹಾಸನ ಜಿಲ್ಲೆಯ ಬಿಎಮ್ ರಸ್ತೆಯ ಖಾಸಗಿ ಬ್ಯಾಂಕ್ ಒಂದರ ಮುಂದೆ ಕೊಲೆಗೈದ ಸ್ಥಿತಿಯಲ್ಲಿ ಅನಾಥ ಮಹಿಳೆ ಶವ ಪತ್ತೆಯಾಗಿದ್ದು, ಆಕೆಯನ್ನು ಎಷ್ಟು ಭೀಕರವಾಗಿ ಕೊಲೆಗೈಯಲಾಗಿತ್ತು ಎಂದರೆ, ಆಕೆಯ ಗುರುತು ಸಿಗದಂತೆ ಮುಖವನ್ನು ಸಂಪೂರ್ಣವಾಗಿ ಕಲ್ಲಿನಿಂದ ಜಜ್ಜಲಾಗಿತ್ತು.
35-40 ವಯಸ್ಸಿನ ಮಹಿಳೆಯ ಕೊಲೆಯ ಭೀಕರತೆ ಎಷ್ಟಿತ್ತು ಎಂಬುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೆರೆದಿಟ್ಟಿವೆ. ಕಾಮುಕ ಕ್ರೂರಿ ಅಂಗಡಿ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಎರಗಲು ಪ್ರಯತ್ನಿಸಿದಾಗ ಆಕೆ ಅಂಗಲಾಚಿ ಬೇಡುತ್ತಾಳೆ. ಅದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕೀಚಕ ಆಕೆಯನ್ನು ಎಳೆದಾಡುತ್ತಾನೆ. ಆಕೆಯ ಪ್ರತಿರೋಧ ಕ್ಯಾರೇ ಅನ್ನದೇ ಆಕೆ ಮಲಗಿದಾಗ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಸಾಯಿಸಿ, ಮೃತದೇಹದ ಮುಂದೆ ತನ್ನ ಕ್ರೂರ ಕಾಮಮೆರೆದು ಮನುಕುಲವೇ ತಲೆ ತಗ್ಗಿಸೋ ಕೃತ್ಯವೆಸಗಿದ್ದಾನೆ.
ನಿರ್ಗತಿಕ ಮಹಿಳೆಯೆಂದು ಅಸಡ್ಡೆ ಮಾಡದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗೆ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು. ಆರೋಪಿ ಮೂಲತಃ ಹಾಸನದವನೇ ಅಥವಾ ಹೊರ ಜಿಲ್ಲೆ, ಹೊರ ರಾಜ್ಯದವನ ಅನ್ನೊದು ಪೊಲಿಸ್ ತನಿಖೆಯಲ್ಲಿ ಬಯಲಾಗಲಿದೆ ಎಂದು ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.