ಬೆಂಗಳೂರು, ಆ 26 (DaijiworldNews/PY): ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆಗೆ ನೀಡುವಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠವು ಗಲಭೆಯ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ್ದು, ತನಿಖೆಗೆ ಸಂಬಂಧಪಟ್ಟಂತ ವರದಿಯನ್ನು ಮುಂದಿನ ವಿಚಾರಣೆಯ ಸಂದರ್ಭ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.
ಗಲಭೆಕೋರರು ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆಯನ್ನು ಉಲ್ಲಂಘಿಸಿದ್ದಾರೆ.ಅಲ್ಲದೇ, ಇದೊಂದು ಪೂರ್ವಯೋಜಿತ ದಾಳಿಯಾಗಿದೆ. ಈ ಬಗ್ಗೆ ಎನ್ಐಎಯಿಂದ ತನಿಖೆ ನಡೆಯಬೇಕು ಎಂದು ಶೇಷಾದ್ರಿಪುರದ ನಿವಾಸಿ ಗಿರೀಶ್ ಭಾರದ್ವಾಜ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಮನವಿ ಮಾಡಿದ ಹೆಚ್ಚುವರಿ ಅಡ್ವೊಕೇಟ್ ಜನರಲ್, ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ಆಧಾರದ ಮೇಲೆ ಹಾನಿಯ ನಷ್ಟವನ್ನು ದಾಳಿಕೋರರಿಂದ ವಸೂಲಿ ಮಾಡಲು ಕ್ಲೇಮ್ ಕಮಿಷನರ್ ನೇಮಿಸಿ ಆದೇಶ ನೀಡಬೇಕು ಎಂದರು.
ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಆಧರಿಸಿ ಪ್ರತ್ಯೇಕವಾದ ಆದೇಶ ನೀಡಲಾಗುವುದು ಎಂದು ಪೀಠ ಹೇಳಿದ್ದು, ಆ.28ಕ್ಕೆ ವಿಚಾರಣೆಯನ್ನು ಮುಂದೂಡಿತು.