ಬೆಂಗಳೂರು, ಆ. 26 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕಿನ ಕಾರಣದಿಂದ ಶಾಲಾ - ಕಾಲೇಜುಗಳು ಮುಚ್ಚಲಾಗಿದ್ದು ಅಕ್ಟೋಬರ್ 1 ರಿಂದ ರಾಜ್ಯದಲ್ಲಿ ಪದವಿ ಕಾಲೇಜು ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಅಧಿಕೃತ ಸುತ್ತೋಲೆ ಇನ್ನೂ ಕೂಡಾ ಹೊರಡಿಸಿಲ್ಲ.
ಈ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಅಂತಿಮ ಸೆಮಿಸ್ಟರ್ ಹಾಗೂ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸುವಂತೆ ಎಲ್ಲಾ ರಾಜ್ಯಗಳಿಗೂ ಆದೇಶ ನೀಡಿದೆ. ಸೆಪ್ಟೆಂಬರ್ ಅತ್ಯಂತ ಒಳಗೆ ಪರೀಕ್ಷೆಗಳನ್ನು ಮುಗಿಸುವಂತೆ ತಿಳಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಶಾಲಾ ಕಾಲೇಜು ತೆರೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದ್ದರು.
ಇದೀಗ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಅಕ್ಟೋಬರ್ 1 ರಿಂದ ಪದವಿ ಕಾಲೇಜು ಆರಂಭವಾಗಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಇನ್ನು ಸ್ನಾತಕ, ಸ್ನಾತಕೋತ್ತರ ತರಗತಿಗಳು ಕೂಡಾ ಆರಂಭವಾಗಲಿದ್ದು ಸೆ. 1 ರಿಂದ ಆನ್ ಲೈನ್ ತರಗತಿ ಆರಂಭವಾಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಸದ್ಯಕ್ಕೆ ಶಾಲೆ ಹಾಗೂ ಪಿಯುಸಿ ತರಗತಿಗಳು ತೆರೆಯುವುದಿಲ್ಲ ಎನ್ನಲಾಗಿದೆ.
ಇನ್ನು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು 28ರವರೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅವಕಾಶ ನೀಡಿದೆ.