ಬೆಂಗಳೂರು, ಆ 26 (DaijiworldNews/PY): ಐಸಿಸ್ ಶಂಕಿತ ಉಗ್ರ ಡಾ.ಅಬ್ದುರ್ ರೆಹಮಾನ್ನ ಸಂಪರ್ಕ ಹೊಂದಿದ್ದ ಇಬ್ಬರು ಸ್ನೇಹಿತರನ್ನು ಎನ್ಐಎ ವಶಕ್ಕೆ ಪಡೆದಿದೆ.
ಅಬ್ದುರ್ ರೆಹುಮಾನ್ನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡ ಎನ್ಐಎ ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಇತ್ತೀಚೆಗೆ ಬಸವನಗುಡಿಯ ಎಂಡಿ ಬ್ಲಾಕ್ ನಿವಾಸಿ ಅಬ್ದುರ್ ರೆಹಮಾನ್ ಅನ್ನು ಬಂಧಿಸಲಾಗಿತ್ತು. ಈತ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ್ದ ದೆಹಲಿ ಎನ್ಐಎ ಅಧಿಕಾರಿಗಳು ಮನೆಯಲ್ಲಿ ಶೋಧ ನಡೆಸುವ ಸಂದರ್ಭ ಆತನನ್ನು ಬಂಧಿಸಿದ್ದರು. ಅಬ್ದುರ್ ರೆಹಮಾನ್ ಸೇರಿ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಸಂಶಯಗೊಂಡ ಎನ್ಐ ಅಧಿಕಾರಿಗಳು ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
ಬಂಧಿತ ಶಂಕಿತ ಉಗ್ರ ಡಾ.ಅಬ್ದುರ್ ರೆಹಮಾನ್ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಆಪ್ತೋಲ್ಮಾಲಜಿಸ್ಟ್ ನಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗೆ ಆತ ಮೆರಿಟ್ ಮೇಲೆ ಉತ್ತೀರ್ಣನಾಗಿದ್ದ. ಆದರೆ, ಈತ ಐಎಸ್ಕೆಪಿ ಎನ್ನುವ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಈತ ಎಂಬಿಬಿಎಸ್ ಮುಗಿಸಿದ ನಂತರ 2014ರಲ್ಲಿ ಸಿರಿಯಾಕ್ಕೆ ಹೋಗಿದ್ದು, ಅಲ್ಲಿ ಆತ ವೈದ್ಯಕೀಯ ಶಿಬಿರಗಳಲ್ಲಿ ಪಾಲ್ಗೊಂಡಿದ್ದ. ಅಲ್ಲದೇ, ಗಾಯಾಳುಗಳಾದ ಉಗ್ರರಿಗೆ ಚಿಕಿತ್ಸೆ ಕೂಡಾ ನೀಡುತ್ತಿದ್ದ ಎಂದು ವಿಚಾರಣೆಯ ಸಂದರ್ಭ ಅಬ್ದುರ್ ರೆಹಮಾನ್ ಒಪ್ಪಿಕೊಂಡಿದ್ದಾನೆ. ಈತನಿಗೆ ತಿಹಾರ್ ಜೈಲಿನಲ್ಲಿ ಅಬ್ದುಲ್ ಬಶೀತ್, ಪೂನಾ ಮೂಲದ ಸಾದಿಯಾ ಅನ್ವರ್, ನಬೀಲ್ ಸಿದ್ದಕಿ ಖತ್ರಿಯೊಂದಿಗೆ ಸಂಪರ್ಕವಿದ್ದು, ಈ ಮೂವರು ಕೂಡಾ ಶಂಕಿತ ಐಸಿಸ್ ನಂಟು ಹೊಂದಿದ್ದರು. ಅಲ್ಲದೇ, ಭಾರತದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ನಡೆಸಿದ್ದ ಎನ್ನಲಾಗಿದೆ.